ದೆಹಲಿ, ಸೆ 15 (DaijiworldNews/HR): ಶಿಕ್ಷಣ ಸಂಸ್ಥೆಗೆ ಪ್ರವೇಶ, ಡ್ರೈವಿಂಗ್ ಲೈಸೆನ್ಸ್ ಪಡೆಯಲು, ಮತದಾರರ ಪಟ್ಟಿ ತಿದ್ದುಪಡಿ, ಆಧಾರ್ ಸಂಖ್ಯೆ, ಮದುವೆ ನೋಂದಣಿ, ಸರ್ಕಾರಿ ಉದ್ಯೋಗ ನೇಮಕಾತಿ ಸೇರಿದಂತೆ ಇತ್ಯಾದಿ ಸೇವೆಗಳನ್ನು ಪಡೆಯಲು ಅಕ್ಟೋಬರ್ 1ರಿಂದ, ಜನನ ಪ್ರಮಾಣಪತ್ರ ಒಂದೇ ದಾಖಲೆಯಾಗಿರುತ್ತದೆ ಎಂದು ಜನನ ಮತ್ತು ಮರಣಗಳ ನೋಂದಣಿ ಕಾಯಿದೆ 2023ರ ಅನುಷ್ಠಾನವನ್ನು ಕೇಂದ್ರ ಗೃಹ ಸಚಿವಾಲಯ ಘೋಷಿಸಿದೆ.
ಜನನ ಪ್ರಮಾಣಪತ್ರ ಪಡೆಯುವುದರಿಂದ ಜನನ ಮತ್ತು ಮರಣಗಳ ಡೇಟಾಬೇಸ್ ರಚಿಸಲು ಸಹಾಯ ಮಾಡುತ್ತದೆ ಮತ್ತು ಸಾರ್ವಜನಿಕ ಸೇವೆಗಳು, ಸಾಮಾಜಿಕ ಪ್ರಯೋಜನಗಳು ಹಾಗೂ ಡಿಜಿಟಲ್ ನೋಂದಣಿಯ, ಪಾರದರ್ಶಕವಾದ ದಾಖಲೆಗಳನ್ನು ನೀಡುವ ಸಲುವಾಗಿ ಈ ಕ್ರಮವನ್ನು ತರಲಾಗಿದೆ.
ಈ ಮಸೂದೆಯನ್ನು ಸಂಸತ್ತಿನ ಮಾನ್ಸೂನ್ ಅಧಿವೇಶನದ ಕೊನೆ ದಿನದಂದು ಎರಡೂ ಸದನಗಳು ಅಂಗೀಕರಿಸಿತ್ತು. ರಾಜ್ಯಸಭೆಯು ಆಗಸ್ಟ್ 7 ರಂದು ಧ್ವನಿ ಮತದ ಮೂಲಕ ಮಸೂದೆಯನ್ನು ಅಂಗೀಕರಿಸಿದೆ ಮತ್ತು ಲೋಕಸಭೆಯು ಆಗಸ್ಟ್ 1 ರಂದು ಅಂಗೀಕರಿಸಿದೆ.