ಬೆಂಗಳೂರು, ಸೆ 14 (DaijiworldNews/HR): ಉಡುಪಿ ಜಿಲ್ಲೆಯ ಕಾರ್ಕಳ ಸೇರಿದಂತೆ ಕರ್ನಾಟಕದ 161 ತಾಲೂಕುಗಳು ಬರಪೀಡಿತ ಎಂದು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಕರ್ನಾಟಕ ಸಚಿವ ಸಂಪುಟ ಉಪಸಮಿತಿ ತೀರ್ಮಾನಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, ಕೇಂದ್ರ ಸರಕಾರದ ಮಾರ್ಗಸೂಚಿಗಳ ಪ್ರಕಾರ ಸಮೀಕ್ಷೆಯನ್ನು ಅನುಸರಿಸಿ 161 ತಾಲೂಕುಗಳಲ್ಲಿ ತೀವ್ರ ಬರ ಮತ್ತು 34 ತಾಲೂಕುಗಳಲ್ಲಿ ಮಧ್ಯಮ ಬರವಿದೆ. ಹೀಗಾಗಿ 195 ತಾಲೂಕುಗಳಲ್ಲಿ ಬರಗಾಲವಿದೆ ಎಂದರು.
ಇನ್ನು 40 ತಾಲೂಕುಗಳು ಮಳೆ ಕೊರತೆ ಎದುರಿಸುತ್ತಿವೆ, ಆದರೆ ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ಬರಪೀಡಿತ ಎಂದು ಘೋಷಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ.ಈ 40 ತಾಲೂಕುಗಳಲ್ಲಿ, ನಾವು ಉಪಗ್ರಹ ಚಿತ್ರಣವನ್ನು ನೋಡಿದಾಗ, ಹಸಿರು ಹೊದಿಕೆ ಅಥವಾ ಸಸ್ಯವರ್ಗದ ಬೆಳವಣಿಗೆ ಮತ್ತು ತೇವಾಂಶದ ತೊಂದರೆ ಕಂಡುಬರುವುದಿಲ್ಲ. ಕೇಂದ್ರದ ಮಾರ್ಗಸೂಚಿಗಳ ಅಡಿಯಲ್ಲಿ ಇವು ಕಡ್ಡಾಯ ಅವಶ್ಯಕತೆಗಳಾಗಿರುವುದರಿಂದ, ಅಲ್ಲಿ ಮಳೆಯ ಕೊರತೆಯ ಹೊರತಾಗಿಯೂ, ನಾವು ಅವುಗಳನ್ನು ಬರಪೀಡಿತ ಎಂದು ಘೋಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಬರ ಘೋಷಣೆಯಾದ ನಂತರ ಪೀಡಿತ ತಾಲೂಕುಗಳಲ್ಲಿ ಕಾರ್ಯಪಡೆಗಳನ್ನು ರಚಿಸಲಾಗುವುದು, ಕುಡಿಯುವ ನೀರು ಸರಬರಾಜು ಮಾಡಲು ಟ್ಯಾಂಕರ್ಗಳನ್ನು ವ್ಯವಸ್ಥೆ ಮಾಡಲು ಮತ್ತು ಬಾಡಿಗೆ ಬೋರ್ವೆಲ್ಗಳನ್ನು ನೀಡಲು ಹಣ ನೀಡಲಾಗುವುದು ಎಂದು ತಿಳಿಸಿದ್ದಾರೆ.