ನವದೆಹಲಿ, ಸೆ 12 (DaijiworldNews/AK): ಕೇರಳದ ಕೋಝಿಕೋಡ್ ಜಿಲ್ಲೆಯಲ್ಲಿ ಇಬ್ಬರು ನಿಫಾ ವೈರಸ್ ನಿಂದ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವ್ಯ ಖಚಿತಪಡಿಸಿದ್ದಾರೆ.
ನಾಲ್ಕು ಮಂದಿ ನಿಫಾ ವೈರಸ್ ಸೋಂಕಿಗೆ ಒಳಗಾಗಿರುವುದಾಗಿ ಶಂಕಿಸಲಾಗಿದ್ದು, ಅವರ ಸ್ಯಾಂಪಲ್ಸ್ ಅನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿರುವುದಾಗಿ ಸಚಿವ ಮಾಂಡವ್ಯ ತಿಳಿಸಿದ್ದಾರೆ.
ಇದೀಗ ಜ್ವರದಿಂದ ಬಳಲುತ್ತಿದ್ದ ಇಬ್ಬರು ನಿಫಾ ವೈರಸ್ ನಿಂದ ಸಾವನ್ನಪ್ಪಿರುವುದಾಗಿ ಕೇಂದ್ರ ಸಚಿವ ಮಾಂಡವ್ಯ ದೃಢಪಡಿಸಿದ್ದು.ಈ ನಿಟ್ಟಿನಲ್ಲಿ ನಿಫಾ ವೈರಸ್ ಭೀತಿಯನ್ನು ಹೆಚ್ಚುವಂತೆ ಮಾಡಿರುವುದಾಗಿ ವರದಿ ತಿಳಿಸಿದೆ.
ಕೇಂದ್ರನಿಫಾ ವೈರಸ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೇರಳಕ್ಕೆ ಕೇಂದ್ರದ ಆರೋಗ್ಯ ಇಲಾಖೆ ತಂಡವನ್ನು ಕಳುಹಿಸಿದ್ದು, ಪರಿಸ್ಥಿತಿಯನ್ನು ಅವಲೋಕಿಸಿ ರಾಜ್ಯ ಸರ್ಕಾರಕ್ಕೆ ನಿಫಾ ವೈರಸ್ ನಿರ್ವಹಣೆ ಕುರಿತು ನೆರವು ನೀಡುವಂತೆ ತಿಳಿಸಿರುವುದಾಗಿ ಮಾಂಡವ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೇರಳದಲ್ಲಿ 2018 ಹಾಗೂ 2021 ರಲ್ಲಿ ಬಾವಲಿಗಳಿಂದ ಹರಡುವ ನಿಫಾ ವೈರಸ್ ಹತ್ತಾರು ಸಾವು ನೋವುಗಳಿಗೆ ಕಾರಣವಾಗಿತ್ತು. ಕೋಝಿಕ್ಕೋಡ್ ನಲ್ಲಿ ಈ ಹಿಂದೆ ಕೂಡ ನಿಫಾ ವೈರಸ್ ಪ್ರಕರಣಗಳು ಪತ್ತೆಯಾಗಿತ್ತು.
ಬಾವಲಿಗಳು ಕಚ್ಚಿದ ಹಣ್ಣನ್ನು ಸೇವಿಸಿದರೆ ಈ ವೈರಸ್ ಹರಡುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಹಾಗೂ ಪ್ರಾಣಿಗಳಿಗೂ ವೇಗವಾಗಿ ನಿಫಾ ವೈರಸ್ ಹರಡುತ್ತದೆ. ಇದು ಉಸಿರಾಟದ ತೊಂದರೆ, ತಲೆನೋವು, ಸ್ನಾಯು ಸೆಳೆತದಂತಹ ಲಕ್ಷಣಗಳನ್ನು ಒಳಗೊಂಡಿರುತ್ತದೆ.