ನವದೆಹಲಿ,ಏ10(AZM):ವಿಶ್ವದ ಅತ್ಯಂತ ಪರಿಸರ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವಾಗಿರುವ ವಾರಣಾಸಿ ಮೂರನೇ ಸ್ಥಾನದಲ್ಲಿದೆ. ಈ ಬಗ್ಗೆ ದಿಲ್ಲಿಯ ಪರಿಸರ ಸಂಸ್ಥೆ ಕೈಮೆಟ್ ಟ್ರೆಂಡ್ಸ್ ಮಾಹಿತಿ ನೀಡಿದೆ.
ದಿಲ್ಲಿಯು ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ ಮತ್ತು ನಗರದಲ್ಲಿದ್ದು, ನಗರದಲ್ಲಿರುವ ವಾಯುಮಾಲಿನ್ಯವನ್ನು ತಡೆಯುವಲ್ಲಿ ಚುನಾಯಿತ ಜನಪ್ರತಿನಿಧಿಗಳು ಅಸಡ್ಡೆ ತೋರುತ್ತಿದ್ದಾರೆ ಎಂದು ಕೈಮೆಟ್ ಟ್ರೆಂಡ್ಸ್ ತನ್ನ ವರದಿಯಲ್ಲಿ ತಿಳಿಸಿದೆ.
ಡಬ್ಲ್ಯುಎಚ್ಒದ ವಿಶ್ವದ ಅತ್ಯಂತ ಹೆಚ್ಚಿನ ವಾಯುಮಾಲಿನ್ಯಗೊಂಡ 15 ನಗರಗಳ ಪಟ್ಟಿಯಲ್ಲಿನ 14 ನಗರಗಳು ಭಾರತದಲ್ಲಿವೆ ಮತ್ತು ಈ ಪೈಕಿ ನಾಲ್ಕು ನಗರಗಳು ಉತ್ತರಪ್ರದೇಶದಲ್ಲಿವೆ ಎಂದು ತಿಳಿಸಿರುವ ವರದಿಯು,ಈ ನಗರಗಳಲ್ಲಿಯ ಆಯಾ ಸಂಬಂಧಿತ ಪ್ರಾಧಿಕಾರಗಳ ಉದ್ದೇಶಿತ ಕ್ರಮಗಳು ಮತ್ತು ಕಾರ್ಯಗಳನ್ನೂ ಪಟ್ಟಿ ಮಾಡಿದೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಬಹಳಷ್ಟು ನಿರ್ಮಾಣ ಕಾಮಗಾರಿಗಳು ನಡೆಯುತ್ತಿರುವುದರಂದ ಅಲರ್ಜಿಗಳು ಮತ್ತು ಉಸಿರಾಟದ ಸಮಸ್ಯೆಗಳಿಂದ ನರಳುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿದೆ ಎಂದು ಅದು ಹೇಳಿದೆ. ಮೋದಿ 2014ರ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಿಂದ ಗೆದ್ದಿದ್ದರು.
ನಗರದಲ್ಲಿಯ ನಿರ್ಮಾಣ ಕಾಮಗಾರಿಗಳ ಭರಾಟೆಯಿಂದಾಗಿ ಉತ್ತರ ಪ್ರದೇಶದ ಇತರ ನಗರಗಳಿಗಂತ ವಾರಣಾಸಿಯಲ್ಲಿ ವಾಯು ಗುಣಮಟ್ಟವು ತೀವ್ರವಾಗಿ ಹದಗೆಡುತ್ತಿದೆ. ಕಳೆದಕೆಲವು ವರ್ಷಗಳಲ್ಲಿ ಅಲರ್ಜಿಗಳು ಮತ್ತು ಉಸಿರಾಟದ ಕಾಯಿಲೆಗಳು ಹೆಚ್ಚಿರುವುದನ್ನು ವೈದ್ಯರು ಮತ್ತು ನಿವಾಸಿಗಳು ದೃಢಪಡಿಸಿದ್ದಾರೆ ಎಂದು ಕ್ಲೈಮೆಟ್ ಟ್ರೆಂಡ್ಸ್ ಹೇಳಿದೆ.
ವಾರಣಾಸಿಯ ವಾಯು ಗುಣಮಟ್ಟ ಸೂಚ್ಯಂಕವು 2017ರಲ್ಲಿ 490 ಮತ್ತು ಡಿಸೆಂಬರ್ 2018ರಲ್ಲಿ 384ಕ್ಕೆ ತಲುಪಿತ್ತು ಎಂದು ವರದಿಯು ತಿಳಿಸಿದೆ. ಇವು ಅನುಕ್ರಮವಾಗಿ'ಅತ್ಯಂತ ಗಂಭೀರ' ಮತ್ತು 'ಅತ್ಯಂತ ಕಳಪೆ' ಮಟ್ಟವನ್ನು ಸೂಚಿಸುತ್ತವೆ.