ನವದೆಹಲಿ, ಏ10(AZM):ರಫೇಲ್ ವಿವಾದದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ಚೌಕಿದಾರ ಚೋರ್ ಹೇ ಎಂಬುವುದು ಸಾಬೀತಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್, ಸುಪ್ರೀಂ ಕೋರ್ಟ್ ನ ಈ ತೀರ್ಪಿನಿಂದ ಮತ್ತಷ್ಟು ಭ್ರಷ್ಟಾಚಾರದ ಪ್ರಕರಣಗಳು ಹೊರಬರಲಿವೆ. ಇದು ನ್ಯಾಯದ ಗೆಲುವು. ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಇದು ಅತ್ಯಂತ ಪ್ರಮುಖ ದಿನ" ಎಂದು ರಾಹುಲ್ ಗಾಂಧಿ ಹೇಳಿದರು.
"ನೀವು ಭ್ರಷ್ಟಾಚಾರ ಮಾಡಿದ್ದೀರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಾನು ಈಗಲೂ ಮೋದಿಯವರಿಗೆ ಸವಾಲೆಸೆಯುತ್ತೇನೆ. ನನ್ನೊಂದಿಗೆ ಚರ್ಚೆಗೆ ಬನ್ನಿ. ಪ್ರೀತಿಯಿಂದ ಚರ್ಚಿಸೋಣ. ಈ ದೇಶದ ಜನರಿಗೆ ರಫೇಲ್ ಬಗ್ಗೆ ತಿಳಿಯಬೇಕಿದೆ. ಭ್ರಷ್ಟಾಚಾರದ ಬಗ್ಗೆ ತಿಳಿಯಬೇಕಿದೆ. ಅಪನಗದೀಕರಣದ ಬಗ್ಗೆ ತಿಳಿಯಬೇಕಿದೆ" ಎಂದು ರಾಹುಲ್ ಗಾಂಧಿ ಸವಾಲೆಸೆದರು. "ಪ್ರಧಾನಿ ಮೋದಿ ಅವರು ವಾಯುಸೇನೆಯ ಹಣವನ್ನು ತೆಗೆದು ಅನಿಲ್ ಅಂಬಾನಿ ಅವರ ಜೇಬಿಗೆ ಹಾಕಿದ್ದಾರೆ. ಆ ಸತ್ಯ ಜನರಿಗೆ ತಿಳಿಯಬೇಕು" ಎಂದು ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಹೇಳಿದರು.
ರಫೇಲ್ ಗೆ ಸಂಬಂಧಿಸಿದ 'ಕಳುವಾದ' ದಾಖಲೆಗಳನ್ನು ಪರಾಮರ್ಶೆಗಾಗಿ ಬಳಸಿಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಿದ್ದು, ಇದರಿಂದ ಸೋರಿಕೆಯಾದ ದಾಖಲೆಗಳನ್ನು ತೀರ್ಪು ಮರುಪರಿಶೀಲನೆಗೆ ಬಳಸಿಕೊಳ್ಳುವಂತೆ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಪ್ರಾಥಮಿಕ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರಕ್ಕೆ ಹಿನ್ನಡೆ ಉಂಟಾದಂತಾಗಿದೆ.