ಹೊಸದಿಲ್ಲಿ, ಎ10(SS): ಪಾಕಿಸ್ಥಾನವು ಪ್ರಧಾನಿ ನರೇಂದ್ರ ಮೋದಿ ಜತೆಗೆ ಹೊಂದಾಣಿಕೆ ಮಾಡಿಕೊಂಡಿದೆ. ಮೋದಿಗೆ ಮತ ಹಾಕಿದರೆ ಪಾಕಿಸ್ಥಾನಕ್ಕೆ ಮತ ಹಾಕಿದ ಹಾಗೆ ಅಗುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಶ್ಮೀರ ಪ್ರಶ್ನೆಯನ್ನು ಇತ್ಯರ್ಥಪಡಿಸಲು ಭಾರತದ ಇತರ ಪಕ್ಷಗಳು ಯತ್ನಿಸಿದಲ್ಲಿ ಬಲಪಂಥೀಯರ ಟೀಕೆ, ಖಂಡನೆಗಳಿಗೆ ತುತ್ತಾಗಬೇಕಾದೀತೆಂಬ ಭಯ ಅವುಗಳಿಗೆ ಇದೆ. ಮೋದಿ ಅವರ ಭಾರತೀಯ ಜನತಾ ಪಕ್ಷ 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಭಾರತದೊಂದಿಗೆ ಶಾಂತಿ ಮಾತುಕತೆಗೆ ಉತ್ತಮ ಅವಕಾಶ ಒದಗುತ್ತದೆ ಮತ್ತು ಕಾಶ್ಮೀರ ಪ್ರಶ್ನೆಯನ್ನು ಇತ್ಯರ್ಥ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಅವರು, ಪಾಕಿಸ್ಥಾನ ಮೋದಿ ಜತೆ ಹೊಂದಾಣಿಕೆ ಮಾಡಿಕೊಂಡಿರುವುದಕ್ಕೆ ಮಾಧ್ಯಮ ವರದಿ ಸಾಕ್ಷಿಯಾಗಿದೆ. ಪಾಕಿಸ್ಥಾನ ಮೋದಿ ಜತೆಗೆ ಅಧಿಕೃತ ಹೊಂದಾಣಿಕೆ ಮಾಡಿಕೊಂಡಿದೆ. ಮೋದಿಗೆ ಓಟ್ ಹಾಕಿದರೆ ಪಾಕಿಸ್ಥಾನಕ್ಕೆ ಓಟ್ ಹಾಕಿದ ಹಾಗೆ ಎಂದು ಟೀಕಿಸಿದ್ದಾರೆ.
ಮಾತ್ರವಲ್ಲ, ಮೋದೀ ಜೀ ಮೊದಲು ನಿಮಗೆ ನವಾಜ್ ಷರೀಫ್ ಮೇಲೆ ಪ್ರೀತಿ ಉಂಟಾಯಿತು. ಈಗ ನಿಮ್ಮ ಪ್ರಿಯ ಸ್ನೇಹಿತ ಇಮ್ರಾನ್ ಖಾನ್ ಮೇಲೆ ಪ್ರೀತಿ ಬಂದಿದೆ. ಒಟ್ಟಾರೆ ಸತ್ಯವಂತೂ ಈಗ ಬಹಿರಂಗವಾಗಿದೆ ಎಂದು ಹೇಳಿದ್ದಾರೆ.