ಹೊಸದಿಲ್ಲಿ, ಸೆ 04 (DaijiworldNews/AK) : ಸೈನಿಕರು ರಜೆಯ ಮೇಲಿದ್ದಾಗ ಸಮಾಜ ಸೇವಾ ಕಾರ್ಯಗಳನ್ನು ಕೈಗೊಳ್ಳುವಂತೆ ಭಾರತೀಯ ಸೇನೆ ಸಲಹೆ ಮಾಡಿದೆ.
ರಜೆಯನ್ನು ಸದ್ಬಳಕೆ ಮಾಡಿಕೊಳ್ಳುವುದು ಮತ್ತು ರಾಷ್ಟ್ರನಿರ್ಮಾಣಕ್ಕೆ ಕೊಡುಗೆ ನೀಡುವ ಸಂಬಂಧ ಸೇನೆಯ ಸಮಾರಂಭಗಳು ಮತ್ತು ಕಲ್ಯಾಣ ನಿರ್ದೇಶನಾಲಯ ಈ ಶಿಫಾರಸ್ಸುಗಳನ್ನು ಮಾಡಿದೆ.
ಸ್ವಚ್ಛಭಾರತ ಅಭಿಯಾನ ಮತ್ತು ಸರ್ವಶಿಕ್ಷಣ ಅಭಿಯಾನದಂಥ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಸ್ಥಳೀಯರಿಗೆ ಶಿಕ್ಷಣ ನೀಡಬೇಕು. ನೈರ್ಮಲ್ಯ, ಸ್ವಚ್ಛತೆ, ರಸ್ತೆ ಸುರಕ್ಷತೆಯಿಂದ ಹಿಡಿದು ವಿವಿಧ ವಿಷಯಗಳ ಬಗ್ಗೆ ಪ್ರಾಥಮಿಕ ಶಾಲೆಗಳಲ್ಲಿ ಉಪನ್ಯಾಸ ನೀಡಬೇಕು ಎಂದು ಸೂಚಿಸಲಾಗಿದೆ.
ರಜೆಯಲ್ಲಿ ತೆರಳುವ ಯಾವುದೇ ಸೈನಿಕರು ತಮ್ಮ ಆಸಕ್ತಿಯ ವಿಷಯವನ್ನು ಆಯ್ಕೆ ಮಾಡಿಕೊಂಡು ರಾಷ್ಟ್ರ ನಿರ್ಮಾಣದ ಪ್ರಯತ್ನಕ್ಕೆ ವೈಯಕ್ತಿಕ ಕೊಡುಗೆಯನ್ನು ನೀಡುವಂತೆ ಪತ್ರದಲ್ಲಿ ತಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಪ್ರತಿ ಮೂರು ತಿಂಗಳಿಗೊಮ್ಮೆ ಈ ಬಗ್ಗೆ ಅಭಿಪ್ರಾಯ ನೀಡಬೇಕು ಎಂದು ಸೂಚಿಸಲಾಗಿದೆ.