ತಿರುವನಂತಪುರ, ಏ 10(MSP): ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಕೇರಳದ ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ದ ಪೊಲೀಸರ ವಿಶೇಷ ತಂಡ ಮಂಗಳವಾರ ಆರೋಪಪಟ್ಟಿ ಸಲ್ಲಿಸಿದೆ.
ಪ್ರಕರಣ ನಡೆದು ಒಂದು ವರ್ಷದ ಬಳಿಕ ಪೊಲೀಸರು ಜ್ಯುಡಿಷಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ಅವರ ಮುಂದೆ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.
ಮುಲಕ್ಕಲ್ ಗೆ ಶಿಕ್ಷೆ ವಿಧಿಸುವಂತೆ ಧರಣಿ ನಡೆಸುತ್ತಿದ್ದ ಕ್ರೈಸ್ತ ಸನ್ಯಾಸಿನಿಯರು ಈ ಬೆಳವಣಿಗೆ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ. ’ನಮ್ಮ ಹಲವಾರು ತಿಂಗಳ ಹೋರಾಟದ ಕಾರಣ ಈ ಪ್ರಕರಣ ಈಗ ತಾರ್ಕಿಕ ಹಂತ ತಲುಪಿದೆ. ಮುಲಕ್ಕಲ್ ಗೆ ಗರಿಷ್ಠ ಶಿಕ್ಷೆ ವಿಧಿಸುವಂತೆ ನಾವು ಮನವಿ ಮಾಡುತ್ತೇವೆ ’ ಎಂದು ನನ್ ಅನುಪಮಾ ತಿಳಿಸಿದ್ದಾರೆ.
ಕಳೆದ ವರ್ಷದ ಜೂನ್ ನಲ್ಲಿ ಹಿರಿಯ ಕ್ರೈಸ್ತ ಸನ್ಯಾಸಿನಿಯ ಮೇಲೆ ಜಲಂಧರ್ ಕ್ಯಾಥೋಲಿಕ್ ಬಿಷಪ್ ಫ್ರಾಂಕೋ ಮುಲಕ್ಕಲ್ ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಕುರುವಿಲನಗಡದಲ್ಲಿರು ಚರ್ಚ್ ನ ಅತಿಥಿ ಗೃಹದಲ್ಲಿ 2014 ರ ಮೇ ತಿಂಗಳಲ್ಲಿ ತಮ್ಮ ಮೇಲೆ ಹಲವು ಬಾರಿ ಲೈಂಗಿಕ ಹಲ್ಲೆ ನಡೆಸಿದ್ದರು ಎಂದು ಸಂತ್ರಸ್ಥ ಕ್ರೈಸ್ತ ಸನ್ಯಾಸಿನಿ ಆರೋಪಿಸಿದ್ದರು.