ಕಲಬುರ್ಗಿ,ಏ 10(MSP): ಪ್ರಧಾನಿ ನರೇಂದ್ರ ಮೋದಿ ಸುಳ್ಳನೇ ಮಾತನಾಡುತ್ತಾರೆ. ಮೊದಲು ಇಸ್ರೋ, ಡಿಆರ್ಡಿಒ ಸ್ಥಾಪನೆ ಮಾಡಿದವರು ಕಾಂಗ್ರೆಸ್ಸಿನವರು ಎಂದು ಪ್ರಧಾನಿ ತಿಳಿದುಕೊಳ್ಳಬೇಕು. ಸೈನ್ಸ್ ಟೆಕ್ನಾಲಜಿಯನ್ನು ಜವಾಹರಲಾಲ್ ನೆಹರು ತಂದಿರುವಂಥದ್ದು, ಈಗ ನಾವು ಅಂತರಿಕ್ಷದಲ್ಲೂ ಸಜೀವ ಉಪಗ್ರಹ ಕ್ಷಿಪಣಿ ಮೂಲಕ ದ್ವಂಸಗೊಳಿಸಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೀವೆ ಅಂಥರಲ್ಲಾ , ಯಾರಿಗಾದರೂ ಮದುವೆ ಆದ ಮರುದಿನವೇ ಮಕ್ಕಳು ಹುಟ್ಟಿತ್ತಾರಾ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಕಲಬುರ್ಗಿಯ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೋದಿ ವಿರುದ್ದ ಕಿಡಿಕಾರಿದರು. ನನ್ನ ವಿರುದ್ದ ಮೋದಿ ಚೇಲಾಗಳು ಚುನಾವಣೆಗೆ ನಿಂತು ನನ್ನನ್ನು ಸೋಲಿಸುತ್ತಾರೆ ಅಂತೆ . ಆದರೆ ಮೋದಿಯ ಚೇಲಾಗಳಿಗೆ ಕಾಲೇ ಇಲ್ಲ, ಇನ್ನು ಇವರು ಪೈಲ್ವಾನರಾಗಲು ಹೇಗೆ ಸಾಧ್ಯ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ಮೋದಿಗೆ ವಿರೋಧ ಪಕ್ಷದವರನ್ನು ಬೈಯುವುದು ಮಾತ್ರ ತಿಳಿದಿದೆ. ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ, ಸುಮಿತ್ರಾ ಮಹಾಜನ್ ಹೀಗೆ ಪಕ್ಷಕ್ಕೆ ದುಡಿದ ಅನೇಕ ಜನರನ್ನು ಕಡೆಗಣಿಸಿ ಅವರಿಗೆಲ್ಲಾ ಗೇಟ್ ಪಾಸ್ ನೀಡಿದ್ದಾರೆ ಎಂದು ಟೀಕಿಸಿದರು.
"ಸಂಸತ್ತಿನಲ್ಲಿ ದೃಷ್ಟಿಗೆ ದೃಷ್ಟಿ ಸೇರಿಸಿ ಇದು ಸರಿಯಿಲ್ಲ ಎನ್ನುವ ಧೈರ್ಯ ಒಂದು ದಿನವೂ ಮೋದಿ ಮಾಡಿಲ್ಲ. ಮೋದಿ ಸಂಸತ್ತಿನ ಹೊರಗಡೆ ಹುಲಿ ಆಡುತ್ತಿದ್ದರೆ, ಒಳಗಡೆ ಇಲಿಯಂತೆ ಕುಳಿತಿರುತ್ತಾನೆ" ಎಂದು ಏಕವಚನದಲ್ಲಿಯೇ ಮೋದಿ ವಿರುದ್ದ ಹರಿಹಾಯ್ದರು.