ಬೆಂಗಳೂರು, ಆ 29 (DaijiworldNews/AK): ಬಹುಮತೊಂದಿಗೆ ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರ ಇದೀಗ ನೂರು ದಿನಗಳನ್ನು ಪೂರೈಸಿದೆ. ಇತ್ತ ಬಿಜೆಪಿ ರಾಜ್ಯ ಸರ್ಕಾರದ 100 ವೈಫಲ್ಯಗಳ ಚಾರ್ಜ್ಶೀಟ್ ಬಿಡುಗಡೆ ಮಾಡಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ರಾಜ್ಯ ಸರ್ಕಾರದ 100 ವೈಫಲ್ಯಗಳ ಒಳಗೊಂಡ ಒಂದು ಪುಸ್ತಕವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿದರು.
ಕೈಕೊಟ್ಟ ಯೋಜನೆಗಳು, ಹಳಿತಪ್ಪಿದ ಆಡಳಿತ ಎಂಬ ಹೆಸರಿನ ಪುಸ್ತಕ ಇದಾಗಿದ್ದು, ಕೇವಲ ಮಾಧ್ಯಮ ವರದಿಗಳನ್ನೇ ಮುದ್ರಿಸಿ ಪುಸ್ತಕದ ರೂಪದಲ್ಲಿ ಬಿಡುಗಡೆ ಮಾಡಲಾಗಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿನ ಆರೋಪಗಳು ಸೇರಿದಂತೆ ವರ್ಗಾವಣೆ ದಂಧೆ, ಶಾಸಕರು-ಸಚಿವರ ನಡುವಿನ ಹಗ್ಗಜಗ್ಗಾಟ ಸೇರಿದಂತೆ ಇತರೆ ವಿಷಯನ್ನೊಳಗೊಂಡಿದೆ.
ಪುಸ್ತಕ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಈ ನೂರು ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಜನದ್ರೋಹ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನೂರಾರು ತಪ್ಪು ಮಾಡಿದೆ. ಇಬ್ಬರು ಸಚಿವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಭ್ರಷ್ಟಾಚಾರ ಆರೋಪ ಕೇಳಿ ಬಂದರೂ ರಾಜೀನಾಮೆ ಪಡೆಯಲಿಲ್ಲ. 2 ಶಕ್ತಿಗಳು ಸಿಎಂ ಕಂಟ್ರೋಲ್ ಮಾಡುತ್ತಿವೆ ಎಂಬುದನ್ನು ಕೇಳಿದ್ದೇವೆ. ಭ್ರಷ್ಟಾಚಾರ ನಿಯಂತ್ರಣ ಮಾಡುವಲ್ಲೂ ಸರ್ಕಾರ ವಿಫಲವಾಗಿದೆ ಎಂದು ಸರರ್ಕಾರದ ವಿರುದ್ಧ ಆರೋಪಗಳ ಸುರಿಮಳೆಗೈದರು.
ಎಲ್ಲದ್ದಕ್ಕಿಂತ ಹೆಚ್ಚಾಗಿ ದ್ವೇಷದ ರಾಜಕಾರಣ ನಡೆಯುತ್ತಿದೆ. ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿ ಜೈಲಿಗೆ ಹಾಕುತ್ತಿದ್ದಾರೆ. ಹಿಂದಿನ ತುರ್ತು ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಮೂರು ತಿಂಗಳಲ್ಲಿ ಶಾಸಕರ ಅನುದಾನ ಕೂಡ ಬಿಡುಗಡೆ ಮಾಡಿಲ್ಲ. ನೂರು ದಿನಗಳಲ್ಲಿ ಮಾಡಿರುವ ತಪ್ಪುಗಳ ಬಗ್ಗೆ ಜನರ ಮುಂದೆ ಇಡುತ್ತೇವೆ ಎಂದು ಹೇಳಿದರು.
ಇದೇ ವೇಳೆ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಇದು ದಿಕ್ಕುತಪ್ಪಿದ ಸರ್ಕಾರವಾಗಿದೆ. ಬಹುಮತದ ಸರ್ಕಾರ 5 ವರ್ಷದ ಆಡಳಿತದ ದಿಕ್ಸೂಚಿ ಹೇಳಬೇಕಿತ್ತು. ಆದ್ರೆ, ಸರ್ಕಾರದ ಹಲವಾರು ವಿಚಾರಗಳಲ್ಲಿ ವೈಫಲ್ಯ ಮತ್ತು ಗೊಂದಲ ಇದೆ. ನಾಡಿನ ಜನರಿಗೆ ಕೊಟ್ಟ ಮಾತು ತಪ್ಪಿದೆ. ಹಣಕಾಸಿನ ವಿಚಾರದಲ್ಲಿ ರಾಜ್ಯ ಸರ್ಕಾರ ಹಳಿ ತಪ್ಪಿದೆ ಎಂದು ವಾಗ್ದಾಳಿ ನಡೆಸಿದರು.