ಚಿಕ್ಕಮಗಳೂರು, ಎ10(SS): ಜನತೆ ಬದಲಾವಣೆಯನ್ನು ಬಯಸಿದ್ದು, ನಿಷ್ಕ್ರಿಯ ಸಂಸದರಿಗಿಂತ, ಕೆಲಸ ಮಾಡುವ ಸಂಸದರು ಬೇಕೆಂಬ ಬಯಕೆ ಜನತೆಯದ್ದಾಗಿದೆ ಎಂದು ಉಡುಪಿ - ಚಿಕ್ಕಮಗಳೂರು ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತೆ ಬದಲಾವಣೆ ಬಯಸಿದ್ದಾರೆ. ನಿಷ್ಕ್ರಿಯ ಸಂಸದರಿಗಿಂತ, ಕೆಲಸ ಮಾಡುವ ಸಂಸದರು ಬೇಕೆಂಬ ಬಯಕೆ ಜನತೆಯದ್ದಾಗಿದೆ. ಈಗಾಗಲೆ ಎರಡೂ ಜಿಲ್ಲೆಗಳಲ್ಲಿ ಹಲವೆಡೆ ಪ್ರವಾಸ ಮಾಡಿದ್ದೇನೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಜನತೆಯಿಂದ ದೊರೆಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಈಗಾಗಲೆ ಚಿರಪರಿಚಿತನಾಗಿದ್ದೇನೆ. ಚಿಕ್ಕಮಗಳೂರು ಜಿಲ್ಲೆಗೆ ಹೊಸಬನಾದರೂ ಜನತೆಯಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಹೇಳಿದರು.
5 ವರ್ಷ ಸಂಸದರಾಗಿದ್ದರೂ ಅವರು ಇಲ್ಲಿ ಒಂದು ಮನೆಯನ್ನೂ ಮಾಡಲಿಲ್ಲ. ಶೋಭಾ ಕರಂದ್ಲಾಜೆ ಸ್ಥಳೀಯರು ಎಂದು ಹೇಳಿಕೊಳ್ಳುತ್ತಾರೆ. ಆದರೆ, ಅವರು ತಮ್ಮ ಮೂಲ ವಿಳಾಸವೆಂದು ಬೆಂಗಳೂರಿನ ವಿಳಾಸ ಕೊಟ್ಟಿದ್ದಾರೆ. ಹಾಗಾಗಿ ಜನರಿಗೆ ತಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಲೂ ಸಾಧ್ಯವಾಗಲಿಲ್ಲ. ಆದರೆ, ತಾವು ಗೆದ್ದಲ್ಲಿ ಚಿಕ್ಕಮಗಳೂರಿನಲ್ಲಿ ಮನೆ ಮಾಡುವೆ ಎಂದು ತಿಳಿಸಿದ್ದಾರೆ.
ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರವನ್ನು ಜೆಡಿಎಸ್ ಪಕ್ಷವೇ ಕಾಂಗ್ರೆಸ್ ಮುಕ್ತವಾಗಿಸಿದೆ ಎಂಬ ಬಿಜೆಪಿ ಮುಖಂಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೈತ್ರಿ ಪಕ್ಷಗಳ ಹೊಂದಾಣಿಕೆಯಂತೆ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಲಾಗಿದೆ. ಹೊಂದಾಣಿಕೆಯಿಂದ ಕ್ಷೇತ್ರದಲ್ಲಿ ಒಂದು ಪಕ್ಷ ಮಾತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು. ಹಾಗೆಂದ ಮಾತ್ರಕ್ಕೆ ಕಾಂಗ್ರೆಸ್ ಮುಕ್ತ ಎನ್ನುವುದು ಸರಿಯಲ್ಲ ಎಂದು ಹೇಳಿದರು.
ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಬೇರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹಲವು ಕ್ಷೇತ್ರಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟು ಕೊಟ್ಟಿದೆ. ಅಂದರೆ ಆ ಕ್ಷೇತ್ರಗಳು ಬಿಜೆಪಿ ಮುಕ್ತವಾದಂತೆಯೇ ಎಂದು ಪ್ರಶ್ನಿಸಿದರು.