ಮೈಸೂರು,ಆ 29 (DaijiworldNews/AK): ಸರ್ಕಾರದ ತಪ್ಪುಗಳ ಬಗ್ಗೆ ಬಿಜೆಪಿಗೆ ಚಾರ್ಜ್ ಶೀಟ್ ತರಲು ಬಿಜೆಪಿ ಪಕ್ಷಕ್ಕೆ ನೈತಿಕ ಹಕ್ಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಅವರು ಮಾಧ್ಯಮದೊಂದಿಗೆ ಮಾತನಾಡಿ, ಸರ್ಕಾರದ 100 ದಿನಗಳ ತಪ್ಪುಗಳನ್ನು ಚಾರ್ಜ್ ಶೀಟ್ ಮಾದರಿಯಲ್ಲಿ ಹೊರತರುವುದಾಗಿ ಬಿಜೆಪಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ , 4 ವರ್ಷದಸರ್ಕಾರದಲ್ಲಿ ಏನೂ ಜನರ ಕೆಲಸ ಮಾಡದವರು ನಮಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ತನಿಖೆ ಆರಂಭವಾಗುತ್ತಿವೆ. ತನಿಖೆ ಕೈಗೊಂಡಿರುವ ಬಗ್ಗೆ ಮೊದಲು ಉತ್ತರಿಸಲಿ ಎಂದು ವಾಗ್ದಾಳಿ ನಡೆಸಿದರು.
ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಅವರು ಅಧಿಕಾರದಲ್ಲಿದ್ದಾಗ 40 ಪರ್ಸೆಂಟ್ ಗೆ ಒತ್ತಾಯ ಮಾಡಿರಲಿಲ್ಲವೇ? ತನಿಖೆಗೆ ನಾವು ಆಗಲೇ ಒತ್ತಾಯ ಮಾಡಿದ್ದೆವು. ಅಧಿಕಾರಕ್ಕೆ ಬಂದ ನಂತರ ತನಿಖೆಗೆ ಕ್ರಮ ಕೈಗೊಂಡಿದ್ದೇವೆ. ಹಾಗಾದರೆ ಜನರ ದುಡ್ಡನ್ನು ತಿಂದುಕೊಂಡು ಹೋಗಿ ಎಂದು ಬಿಡಬೇಕಿತ್ತೆ ಎಂದು ಪ್ರಶ್ನಿಸಿದರು.