ಮೈಸೂರು, ಆ 27 (DaijiworldNews/SM): ಖಾತೆ ಮಾಡಿಸಿ ಅಂತಾ ಜನ ನನ್ನ ಬಳಿ ಬರುತ್ತಿದ್ದಾರೆ. ಅಧಿಕಾರಿಗಳು ಜನರ ಕೆಲಸ ಮಾಡಿದರೆ ಸಿಎಂ ಬಳಿ ಏಕೆ ಬರುತ್ತಾರೆ? ಜನ ಸಣ್ಣ ಪುಟ್ಟ ಸಮಸ್ಯೆಗಳಿಗೆ ನನ್ನ ಮನೆ ಬಾಗಿಲಿಗೆ ಬರಬೇಕಾ? ಹಾಗಾದರೆ ನೀವೆಲ್ಲಾ ಯಾಕೆ ಇದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಇಂದು ಮೈಸೂರಿನಲ್ಲಿ ಸತತ 8 ಗಂಟೆಗಳ ಕಾಲ ಕೆಡಿಪಿ ಸಭೆ ನಡೆಸಿದ ಸಿಎಂ, ಕೊನೆಯಲ್ಲಿ ಅಧಿಕಾರಿಗಳ ವಿರುದ್ಧ ಫುಲ್ ಗರಂ ಆದರು. ಅಧಿಕಾರಿಗಳು ಜನರ ಕೆಲಸ ಮಾಡಲು ನೆಪ ಹೇಳುತ್ತಿದ್ದಾರೆ. ಜಾತಿ ಪ್ರಮಾಣಪತ್ರ ಪಡೆಯಲು ನೂರೆಂಟು ಸಲ ಅಲೆಯಬೇಕಾ? ಎಲ್ಲಾ ಸೌಲಭ್ಯ ಪಡೆದರೂ ಜನರ ಕೆಲಸ ಏಕೆ ಮಾಡುತ್ತಿಲ್ಲ? ಜನ ನಮ್ಮ ಮಾಲೀಕರು, ಅಧಿಕಾರಿಗಳು, ಜನಪ್ರತಿನಿಧಿಗಳಲ್ಲ. ನಾವು ಸೇವಕರು ಮಾತ್ರ. ಜನರ ಹಣದಲ್ಲಿ ನಿಮಗೆ, ನಮಗೆ ಎಲ್ಲಾ ರೀತಿಯ ಸವಲತ್ತುಗಳು ಸಿಗುತ್ತಿವೆ. ಹೀಗಾಗಿ, ಜನರನ್ನು ಸಣ್ಣ ಪುಟ್ಟ ಕೆಲಸಕ್ಕೆ ಸರ್ಕಾರಿ ಕಚೇರಿಗಳಿಗೆ ಅಲೆಸದಂತೆ ಕೆಲಸ ಮಾಡಬೇಕು ಎಂದು ಆದೇಶಿಸಿದರು