ಮುಂಬೈ, ಆ 28 (DaijiworldNews/AK): ರಿಲಾಯನ್ಸ್ ಗ್ರೂಪ್ನ ಸ್ಥಾಪಕ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ರಿಲಾಯನ್ಸ್ ಬೋರ್ಡ್ನಿಂದ ಕೆಳಗಿಳಿದಿದ್ದಾರೆ. ಅವರ ಮೂವರು ಮಕ್ಕಳಾದ ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರು ಬೋರ್ಡ್ ನಿರ್ದೇಶಕರಾಗಿ ನೇಮಕವಾಗಿದ್ದಾರೆ.
ಈ ಮೂವರೂ ಕೂಡ ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ಗಳಾಗಲಿದ್ದಾರೆ. ಇನ್ನು, ನೀತಾ ಅಂಬಾನಿ ಅವರು ರಿಲಾಯನ್ಸ್ ಫೌಂಡೇಶನ್ನ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹೇಳಿಕೆ ಮೂಲಕ ತಿಳಿಸಿದೆ.
ಆರ್ಐಎಲ್ನ ವಾರ್ಷಿಕ ಮಹಾಸಭೆಗೆ ಮುನ್ನ ನಿರ್ದೇಶಕರ ಮಂಡಳಿಯ ಸಭೆ ನಡೆದಿತ್ತು. ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರನ್ನು ಕಂಪನಿಯ ನಾನ್ ಎಕ್ಸಿಕ್ಯೂಟಿವ್ ನಿರ್ದೇಶಕರನ್ನಾಗಿ ನೇಮಕ ಮಾಡುವಂತೆ ಮಾನವ ಸಂಪನ್ಮೂಲ ಸಮಿತಿಯಿಂದ ಶಿಫಾರಸು ಮಾಡಲಾಗಿತ್ತು. ಬೋರ್ಡ್ ಡೈರೆಕ್ಟರ್ಸ್ ಸಭೆಯಲ್ಲಿ ಈ ಶಿಫಾರಸನ್ನು ಅಂಗೀಕರಗೊಂಡಿದೆ.
ಷೇರುದಾರರ ಅನುಮೋದನೆ ಬಳಿಕ ಈ ಮೂವರು ಅಧಿಕಾರ ಸ್ವೀಕರಿಸಿದ ಬಳಿಕ ಅವರ ನೇಮಕಾತಿ ಜಾರಿಗೆ ಬರುತ್ತದೆ ಎಂದು ಆರ್ಐಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ರಿಯಾಲನ್ಸ್ ಫೌಂಡೇಶನ್ನ ಚಟುವಟಿಕೆಗಳತ್ತ ಸಂಪೂರ್ಣ ಗಮನ ಕೊಡುವ ಸಲುವಾಗಿ ರಿಲಾಯನ್ಸ್ ಬೋರ್ಡ್ ನಿರ್ದೇಶಕಿ ಸ್ಥಾನದ ಜವಾಬ್ದಾರಿಯಿಂದ ನೀತಾ ಅಂಬಾನಿ ಹಿಂದೆ ಸರಿದಿರುವುದು ತಿಳಿದುಬಂದಿದೆ. ಆದರೆ, ರಿಲಾಯನ್ಸ್ ಫೌಂಡೇಶನ್ ಛೇರ್ಪರ್ಸನ್ ಆಗಿ ನೀತಾ ಅಂಬಾನಿ ಅವರು ಆರ್ಐಎಲ್ ಮಂಡಳಿಯ ಎಲ್ಲಾ ಸಭೆಗಳಿಗೂ ಖಾಯಂ ಆಹ್ವಾನಿತೆಯಾಗಿ ಪಾಲ್ಗೊಳ್ಳಲಿದ್ದಾರೆ.