ಚಿಕ್ಕೋಡಿ, ಆ 28 (DaijiworldNews/HR): ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮದಲ್ಲಿ ತಂದೆ ಅನಾರೋಗ್ಯದಿಂದ ಮೃತಪಟ್ಟರೂ ವಿದೇಶದಲ್ಲಿ ನೆಲೆಸಿರುವ ಮಕ್ಕಳು ಅಂತ್ಯಕ್ರಿಯೆಗೆ ಬಾರದೆ ಪೊಲೀಸರೇ ವೃದ್ಧನ ಅಂತ್ಯಕ್ರಿಯೆ ನೆರವೇರಿಸಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಪುಣೆ ಮೂಲದ ಮೂಲಚಂದ್ರ ಶರ್ಮಾ (72) ಮೃತಪಟ್ಟ ವೃದ್ಧ.
ಇನ್ನು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಮೂಲಚಂದ್ರ ಶರ್ಮಾರನ್ನು ವ್ಯಕ್ತಿಯೊಬ್ಬರು ನಾಗರಮುನ್ನೋಳಿ ಕುಂಬಾರ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೆರೆತಂದಿದ್ದು, ಆಸ್ಪತ್ರೆಯ ಹತ್ತಿರದಲ್ಲಿದ್ದ ಶಿವನೇರಿ ಲಾಡ್ಜ್ನಲ್ಲಿ ವೃದ್ಧನನ್ನು ಇರಿಸಿ, ಗುತ್ತಿಗೆ ಆಧಾರದಲ್ಲಿ ಮೂಲಚಂದ್ರ ಶರ್ಮಾರನ್ನು ಆರೈಕೆ ಮಾಡುತ್ತಿದ್ದರು. ತನ್ನ ಗುತ್ತಿಗೆ ವಾಯಿದೆ ಮುಗಿದ ಬಳಿಕ ವ್ಯಕ್ತಿ ವೃದ್ಧನನ್ನು ಲಾಡ್ಜ್ನಲ್ಲಿಯೇ ಬಿಟ್ಟು ತೆರಳಿದ್ದ. ಲಾಡ್ಜ್ ಮ್ಯಾನೇಜರ್ ವೃದ್ಧನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಬಂದು ವೃದ್ಧನನ್ನು ವಿಚಾರಿಸಿದಾಗ ತಾನು ನಿವೃತ್ತ ಬ್ಯಾಂಕ್ ಮ್ಯಾನೆಜರ್, ತನ್ನ ಮಗ ದಕ್ಷಿಣ ಆಫ್ರಿಕಾ ಹಾಗೂ ಮಗಳು ಕೆನಡಾದಲ್ಲಿ ಉತ್ತಮ ಹುದ್ದೆಯಲ್ಲಿದ್ದಾರೆ ಎಂದು ಮೂಲಚಂದ್ರ ಶರ್ಮಾ ತಿಳಿಸಿದ್ದಾರೆ. ಬಳಿಕ ವಿದೇಶದಲ್ಲಿರುವ ವೃದ್ಧನ ಮಕ್ಕಳ ಫೋನ್ ನಂಬರ್ ಪಡೆದು ಪೊಲೀಸರು ನಿರಂತರವಾಗಿ ಸಂಪರ್ಕಕ್ಕೆ ಪ್ರಯತ್ನಿಸಿದ್ದಾರೆ. ಆದರೆ ಪೊಲೀಸರ ಕರೆಗೆ ಅವರಿಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಮೂಲಚಂದ್ರ ಶರ್ಮಾರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು.
ಇನ್ನು ಎರಡು ದಿನಗಳ ಹಿಂದೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೂಲಚಂದ್ರ ಶರ್ಮಾ ಸಾವನ್ನಪ್ಪಿದ್ದು, ಈ ವಿಷಯ ತಿಳಿಸಲು ವಿದೇಶದಲ್ಲಿರುವ ಅವರ ಮಗಳಿಗೆ ಕರೆ ಮಾಡಿದಾಗ ನಮಗೂ ಅವರಿಗೂ ಸಂಬಂಧ ಇಲ್ಲ ಎಂದು ಹೇಳಿ ಕರೆಯನ್ನು ಕಟ್ ಮಾಡಿದ್ದು, ಬಳಿಕ ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.