ಮುಂಬಯಿ, ಆ 27 (DaijiworldNews/AK): ಬಾಲಿವುಡ್ ನಟ ಶಾರುಖ್ ಖಾನ್ ಅವರ ನಿವಾಸದ ಮುಂದೆ ಆನ್ಲೈನ್ ಗೇಮಿಂಗ್ ಆ್ಯಪ್ಸ್ ನ ಜಾಹೀರಾತಿನ ವಿಚಾರಕ್ಕೆ ಪ್ರತಿಭಟನೆ ನಡೆದಿದೆ.
ಶಾರುಖ್ ಖಾನ್ A23 ಎನ್ನುವ ಆನ್ಲೈನ್ ರಮ್ಮಿ ಪೋರ್ಟಲ್ ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಎ23 ಇತ್ತೀಚೆಗೆ ಶಾರುಖ್ ಅವರನ್ನು ಬ್ರಾಂಡ್ ಅಂಬಾಸಿಡರ್ ನ್ನಾಗಿ ಮಾಡಿದೆ. ಇದರ ಪ್ರೋಮೋದಲ್ಲಿ ಶಾರುಖ್ “ಚಲೋ ಸಾಥ್ ಖೇಲೇ." ಎಂದಿದ್ದಾರೆ.ಇದೇ ವಿಚಾರವಾಗಿ ಅನ್ಟಚ್ ಯೂತ್ ಫೌಂಡೇಶನ್ ಸದಸ್ಯರು ಶಾರುಖ್ ನಿವಾಸ ʼಮನ್ನತ್ʼ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಆನ್ಲೈನ್ ಗೇಮಿಂಗ್ ಅಪ್ಲಿಕೇಶನ್ಗಳು ಮತ್ತು ಜಂಗ್ಲೀ ರಮ್ಮಿ, ಜುಪೀ ಮತ್ತು ಇತರ ಪೋರ್ಟಲ್ಗಳ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಅನ್ಟಚ್ ಯೂತ್ ಫೌಂಡೇಶನ್ ಹೇಳಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಿವಾಸದ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.
ಹೊಸ ತಲೆಮಾರಿನವರು ಜಂಗ್ಲಿ ರಮ್ಮಿ ಆಡುವುದರಲ್ಲಿ ತೊಡಗಿದ್ದಾರೆ. ಯಾರಾದರೂ ಹೊರಗೆ ಜಂಗ್ಲೀ ರಮ್ಮಿ ಆಡುತ್ತಿದ್ದರೆ ಅಥವಾ ಜೂಜಾಡುತ್ತಿದ್ದರೆ, ಪೊಲೀಸರು ಅವರನ್ನು ಬಂಧಿಸುತ್ತಾರೆ, ಆದರೆ ಆನ್ಲೈನ್ ಆಟಗಳನ್ನು ಪ್ರಚಾರ ಮಾಡುವ ದೊಡ್ಡ ಬಾಲಿವುಡ್ ತಾರೆಗಳು ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಬಾಲಿವುಡ್ ಸ್ಟಾರ್ ಗಳಿಗೂ ಇದು ತಪ್ಪು ಎಂದು ಗೊತ್ತಿದ್ದರೂ ಹಣ ಪಡೆದು ಪ್ರಚಾರ ಮಾಡುತ್ತಿದ್ದಾರೆ. ಅಪ್ಲಿಕೇಶನ್ಗಳು ಕಾನೂನುಬಾಹಿರವಾಗಿವೆ. ಇಂತಹ ಜಾಹೀರಾತುಗಳನ್ನು ನಿಲ್ಲಿಸಬೇಕು ಎಂದು ಅನ್ಟಚ್ ಇಂಡಿಯಾ ಫೌಂಡೇಶನ್ನ ಅಧ್ಯಕ್ಷ ಕೃಷ್ಣ ಅಡಲ್ ಒತ್ತಾಯಿಸಿದರು.