ಬೆಂಗಳೂರು, ಏ 09(SM): ಗೋಪ್ಯತಾ ಪ್ರಮಾಣ ಹಾಗೂ ಅಧಿಕೃತ ರಹಸ್ಯ ಕಾಯ್ದೆಯನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದೆ. ಅಲ್ಲದೆ ಸಿಎಂ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹಾಗೂ ಬಿಜೆಪಿಯ ಇತರ ಸದಸ್ಯರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಗೋಪ್ಯತಾ ಪ್ರಮಾಣ ಹಾಗೂ ಅಧಿಕೃತ ರಹಸ್ಯ ಕಾಯ್ದೆ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡವಳಿಕೆಯು ಪ್ರಶ್ನಾರ್ಹವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಲು ವಿನಂತಿಸಿದ್ದಾರೆ.
ಕರ್ನಾಟಕದಲ್ಲಿ ಆದಾಯ ತೆರಿಗೆ ದಾಳಿ ಆಗುವ ಒಂದು ದಿನ ಮೊದಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಆ ವಿಚಾರವನ್ನು ಬಹಿರಂಗ ಪಡಿಸಿದರು. ಗುತ್ತಿಗೆದಾರರ ಬಳಿ ದೊಡ್ಡ ಮೊತ್ತದ ನಗದು ಹಾಗೂ ದಾಖಲೆಗಳು ಇದ್ದವು ಎಂದು ಸಾರ್ವಜನಿಕವಾಗಿಯೇ ಬಹಿರಂಗವಾಗಿದೆ ಎಂದು ತಿಳಿಸಿದ್ದಾರೆ. ಚುನಾವಣೆಗೆ ಮುನ್ನ ಸರ್ಜಿಕಲ್ ಸ್ಟ್ರೈಕ್, ದಾಳಿಗಳು ಆಗುತ್ತವೆ ಎಂದು ಸೇನಾಧಿಕಾರಿಯೊಬ್ಬರು ಕುಮಾರಸ್ವಾಮಿಗೆ ಎರಡು ವರ್ಷದ ಹಿಂದೆ ಹೇಳಿದ್ದರಂತೆ. ಇದನ್ನು ಬಹಿರಂಗಗೊಳಿಸುವುದು ಕೂಡ ಅಧಿಕೃತ ರಹಸ್ಯ ಕಾಯ್ದೆಯ ಉಲ್ಲಂಘನೆಯಾಗಿದೆ.