ವಿಜಯಪುರ, ಆ 25 (DaijiworldNews/AK): ರಾಜ್ಯದ ಬರ ಪರಿಸ್ಥಿತಿ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ರಾಜಕೀಯ ಮಾಡುವುದನ್ನು ಬಿಟ್ಟು. ರಾಜ್ಯದ ಜನರ ಹಿತದೃಷ್ಟಿಯಿಂದ ಬರ ಘೋಷಣೆಗೆ ಅಡ್ಡಿಯಾಗಿರುವ ಎನ್ಡಿಆರ್ಎಫ್ ನಿಯಮಗಳ ಸಡಿಲಿಕೆಗಾಗಿ ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಕೊರತೆ ಉಂಟಾಗಿ, ಸಮಸ್ಯೆ ಎದುರಾಗಿದೆ. ಹೀಗಾಗಿ ರಾಜಕೀಯ ಮಾಡುವುದನ್ನು ಬಿಟ್ಟು ರೈತರ ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಧಾವಿಸಲು ಬೊಮ್ಮಾಯಿ ಅವರು ಮುಂದಾಗಲಿ ಎಂದರು.
ಬರ ಪೀಡಿತ ಜಿಲ್ಲೆಗಳೆಂದು ಘೋಷಿಸುವ ಕುರಿತು ಕೇಂದ್ರ ಸರ್ಕಾರದ ನಿಯಮಗಳು ಅಡ್ಡಿಯಾಗಿವೆ. ಹೀಗಾಗಿ ಇಲ್ಲಿ ಮಾತನಾಡುವ ಬದಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕೀಯ ಬಿಟ್ಟು ರಾಜ್ಯದ ಜನರ ನೆರವಿಗೆ ಬರಬೇಕಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲಿ ಎಂದು ಸಲಹೆ ನೀಡಿದರು.