ನವದೆಹಲಿ,ಏ09(AZM): ಟಿಕ್ ಟಾಕ್ ಆಯಪ್ ಅನ್ನು ನಿಷೇಧಿಸಿರುವ ಮದ್ರಾಸ್ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 15ಕ್ಕೆ ಕೈಗೆತ್ತಿಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಇಂದು ತಿಳಿಸಿದೆ.
ಚೀನಾದ ಬೈಟ್ಡಾನ್ಸ್ ಕಂಪನಿಯ ಟಿಕ್ ಟಾಕ್ ಮೊಬೈಲ್ ಆಯಪ್ ಭಾರತದ ಯುವ ಸಮೂಹವನ್ನು ಆಕರ್ಷಿಸುತ್ತಿದ್ದು ಇದರಲ್ಲಿ ವೀಡಿಯೋ ಮಾಡಲೆಂದು ಯುವ ಸಮೂಹ ಒಂದೊಂದು ಸಾಹಸಕ್ಕೆ ಹೊರಟು ಜೀವಹಾನಿಯಾದ ಸಂದರ್ಭವು ಉಂಟಾಗಿತ್ತು. ಅಲ್ಲದೆ ಈ ಆಯಪ್ ನಲ್ಲಿ ಅಶ್ಲೀಲ ಅಸಭ್ಯ ವೀಡಿಯೋಗಳು ಪ್ರಸಾರವಾಗುತ್ತಿತ್ತು.ಈ ಹಿನ್ನಲೆ ಆಪ್ ಡೌನ್ಲೋಡ್ ಮಾಡುವುದನ್ನು ನಿಷೇಧ ಮಾಡುವಂತೆ ಮದ್ರಾಸ್ ಹೈಕೋರ್ಟ್ ಏಪ್ರಿಲ್ 3ರಂದು ಕೇಂದ್ರ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ಈ ಆಯಪ್ನಿಂದ ತಯಾರಾಗುತ್ತಿರುವ ವಿಡಿಯೊಗಳು ವ್ಯಕ್ತಿಯ ಖಾಸಗಿತನವನ್ನು ಹರಣ ಮಾಡುತ್ತಿವೆ' ಎಂದು ಅಭಿಪ್ರಾಯಪಟ್ಟಿದ್ದ ಮದ್ರಾಸ್ ಹೈಕೋರ್ಟ್, ಟಿಕ್ ಟಾಕ್ನಿಂದ ಮಾಡಲಾದ ವಿಡಿಯೊಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೂ ಸೂಚನೆ ನೀಡಿತ್ತು.