ಮೈಸೂರು, ಆ 25 (DaijiworldNews/MS): ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಭಾರತದ ಅತಿದೊಡ್ಡ ಕಾರ್ಯಕ್ರಮವೇ ಗೃಹಲಕ್ಷ್ಮಿ. ಸುಮಾರು 1.10 ಕೋಟಿ ಹೆಣ್ಣು ಮಕ್ಕಳು ಅರ್ಜಿ ಸಲ್ಲಿಸಿದ್ದು ಎಲ್ಲರ ಖಾತೆಗೂ 2 ಸಾವಿರ ಹಣ ಸೇರಲಿದೆ" ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಆ. 30 ರಂದು ಮೈಸೂರಿನಲ್ಲಿ ನಡೆಯುವ ಗೃಹಲಕ್ಷ್ಮೀ ಯೋಜನೆ ಉದ್ಘಾಟನಾ ಸಮಾರಂಭದ ಸಿದ್ಧತೆಯ ಪರಿಶೀಲನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್ "ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರು ಭಾಗವಹಿಸಲಿದ್ದು, ಚಾಮರಾಜನಗರ, ಕೊಡಗು, ಹಾಸನ, ಮಂಡ್ಯ ಭಾಗದ ಹೆಣ್ಣು ಮಕ್ಕಳು ನೇರವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮ 10,400 ಜಾಗಗಳಲ್ಲಿ 6 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳಲ್ಲಿ, ಮೂರು ಪಂಚಾಯಿತಿಗಳಿಗೆ ಒಂದು ಕಡೆಯಂತೆ, ವಾರ್ಡ್ಗಳಲ್ಲಿ ಒಂದು ಕಡೆ, ಬೆಂಗಳೂರಿನ 198 ವಾರ್ಡ್ಗಳಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗಲಿದೆ. ಜೂಮ್ ಆನ್ಲೈನ್ ವೇದಿಕೆಯಲ್ಲೂ ಪ್ರಸಾರವಾಗಲಿದೆ.
ಇಡೀ ದೇಶದಲ್ಲೇ ವಿನೂತನವಾದ ಕಾರ್ಯಕ್ರಮ ಇದಾಗಿದೆ. ಪಂಚಾಯಿತಿ ಮಟ್ಟದ ಒಂದಷ್ಟು ಜನ ಹೆಣ್ಣು ಮಕ್ಕಳು ರಾಷ್ಟ್ರೀಯ ನಾಯಕರ ಜೊತೆ ನೇರವಾಗಿ ಸಂವಾದ ಮಾಡಬಹುದು. ಮೈಸೂರಿನಲ್ಲಿ ಇರುವ ವೇದಿಕೆಯ ಅಳತೆಯಷ್ಟೇ 140 ಅಡಿಯ ಪರದೆಯ ವ್ಯವಸ್ಥೆ ಮಾಡಿದ್ದು ಆ ಪರದೆಯಲ್ಲಿ ಎಲ್ಲಾ ಪಂಚಾಯಿತಿಗಳ ವೀಕ್ಷಕರನ್ನು ತೋರಿಸಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಯ ಫಲಾನುವಭವಿಗಳು ಮನೆಯ ಮುಂದೆ " ನಾ ನಾಯಕಿ", "ಗೃಹಲಕ್ಷ್ಮೀ" ಎಂದು ರಂಗೋಲಿ ಹಾಕಿ ಸಂಭ್ರಮಿಸುವ ಕಾರ್ಯಕ್ರಮವೂ ಇದೆ.
ಪ್ರತಿ ಯಜಮಾನಿಯ ಮನೆಗೆ ಹೋಗಿ ಅಧಿಕಾರಿಗಳು ಖುದ್ದಾಗಿ ಆಹ್ವಾನ ಪತ್ರಿಕೆ ನೀಡುತ್ತಾರೆ. ಯಾವುದೇ ಪಕ್ಷದ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಇದು ಪಕ್ಷಾತೀತ ಕಾರ್ಯಕ್ರಮ. ಎಲ್ಲಾ ಪಕ್ಷದ ಶಾಸಕರು ಸಂಭ್ರಮದಿಂದ ಭಾಗವಹಿಸಬಹುದು.
5 ಜಿಲ್ಲೆಗಳ ಮಹಿಳೆಯರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಪಿಡಿಓಗಳು, ಅಂಗನವಾಡಿ ಕಾರ್ಯಕರ್ತರು ಅರ್ಜಿ ಹಾಕಿದ ಮಹಿಳೆಯರಲ್ಲಿ ಪಂಚಾಯಿತಿವಾರು ಆಯ್ಕೆಮಾಡಿ ಕರೆದುಕೊಂಡು ಬರುವ ವ್ಯವಸ್ಥೆ ಮಾಡಲಾಗಿದೆ.
ಲೋಕಸಭಾ ಚುನಾವಣೆಗೆ ತಾಲೀಮು ಮಾಡಲಾಗುತ್ತಿದೆಯೇ ಎನ್ನುವ ಪ್ರಶ್ನೆಗೆ "ನಮ್ಮ ಪಂಚ ಗ್ಯಾರಂಟಿಗಳನ್ನು ತಲುಪಿಸುವ ಕೆಲಸ ಅಷ್ಟೇ, ನಮ್ಮ ಆಚಾರ, ವಿಚಾರಗಳನ್ನು ತಿಳಿಸುವ ಕೆಲಸ ಮಾಡುತ್ತಿದ್ದೇವೆ. ಇದರಲ್ಲಿ ರಾಜಕೀಯ ಏನಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ" ಎಂದು ಹೇಳಿದರು.