ಬೆಂಗಳೂರು, ಆ 23 (DaijiworldNews/SM): ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ನಿರ್ಧಾರಕ್ಕೆ ಬಿಜೆಪಿ ಅಸಮಾಧಾನ ವ್ಯಕ್ತಪಡಿಸುತ್ತಿದೆ. ಯಾವುದೇ ಕಾರಣಕ್ಕೂ ರಾಜ್ಯದ ರೈತರ ಹಿತ ಬಲಿ ಕೊಡುವುದಿಲ್ಲ ಎಂಬುವುದಾಗಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಈ ನಡುವೆ ಕಾವೇರಿ, ಮೇಕೆದಾಟು, ಅಪ್ಪರ್ ಕೃಷ್ಣ ಮತ್ತು ಮಹದಾಯಿ ವಿವಾದ ಸಂಬಂಧ ಕೇಂದ್ರದ ಬಳಿಗೆ ಸರ್ವ ಪಕ್ಷಗಳ ನಿಯೋಗ ಕರೆದೊಯ್ಯಲು ನಿರ್ಧಾರ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇಂದು ಸರ್ವಪಕ್ಷ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಕರ್ನಾಟಕದ ನೀರಿನ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊತ್ತೇವೆ. ಇದಕ್ಕೆ ಸರ್ವ ಪಕ್ಷಗಳು ಸಹ ಸಮ್ಮತಿ ಸೂಚಿಸಿವೆ ಎಂದು ಸಿಎಂ ತಿಳಿಸಿದ್ದಾರೆ. ಸರ್ವಪಕ್ಷ ನಿಯೋಗ, ಕೇಂದ್ರ ಪರಿಸರ ಸಚಿವರನ್ನು ಸಹ ಭೇಟಿ ಮಾಡಲಿದ್ದು, ಮೇಕೆದಾಟು ಯೋಜನೆಗೆ ಅರಣ್ಯ ಪ್ರದೇಶದ ಕ್ಲಿಯರೆನ್ಸ್ ನೀಡಬೇಕೆಂದು ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಜಲ ವಿವಾದ, ಭಾಷೆ ಗಡಿ ಬಗ್ಗೆ ರಾಜ್ಯದ ನಿಲುವು ತೆಗೆದುಕೊಳ್ಳುವಾಗ ಯಾವುದೇ ರಾಜಕೀಯ ಮಾಡಿಲ್ಲ. ಸರ್ಕಾರ ರಾಜ್ಯದ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ನಿಲುವುಗಳಿಗೆ ಬೆಂಬಲವಿದೆ ಎಂದು ಸರ್ವ ಪಕ್ಷದ ನಾಯಕರು ಹೇಳಿದ್ದಾರೆ ಎಂದು ಸಿಎಂ ತಿಳಿಸಿದರು.