ನವದೆಹಲಿ, 23 (DaijiworldNews/AK): ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲೆ ಬುಧವಾರ ಸಂಜೆ 06.03ಕ್ಕೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಆಗಿದ್ದು ಪ್ರಧಾನಿ ನರೇಂದ್ರ ಮೋದಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
”ಅಮೃತ ಕಾಲದ ಮೊದಲ ಬೆಳಕಿನಲ್ಲಿ ಈ ಯಶಸ್ಸಿನ ಅಮೃತ ಮಳೆ ಸುರಿದಿದೆ. ನಾವು ಭೂಮಿಯ ಮೇಲೆ ಪ್ರತಿಜ್ಞೆ ಮಾಡಿದ್ದೇವೆ ಮತ್ತು ಅದನ್ನು ಚಂದ್ರನ ಮೇಲೆ ನಿಜಗೊಳಿಸಿದ್ದೇವೆ. ಭಾರತ ಈಗ ಚಂದ್ರನ ಮೇಲಿದೆ. ಇದೊಂದು ಐತಿಹಾಸಿಕ ಕ್ಷಣ” ಎಂದು ಮೋದಿ ಬಣ್ಣಿಸಿದ್ದಾರೆ.
ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗಿಯಾಗಲು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ನೇರಪ್ರಸಾರ ವೀಕ್ಷಿಸಿ ಯಶಸ್ಸಿನ ಸಂಭ್ರಮದ ಬೆನ್ನಲ್ಲೇ ಅಭಿನಂದನಾ ನುಡಿಗಳನ್ನಾಡಿದರು.
ಹೊಸ ಇತಿಹಾಸ ನಿರ್ಮಾಣವಾಗುತ್ತಿದ್ದಂತೆಯೇ ಪ್ರತಿಯೊಬ್ಬ ಭಾರತೀಯನೂ ಸಂಭ್ರಮಾಚರಣೆಯಲ್ಲಿ ಮಗ್ನನಾಗುತ್ತಾನೆ, ಪ್ರತಿ ಮನೆಯಲ್ಲೂ ಸಂಭ್ರಮಾಚರಣೆ ಶುರುವಾಗಿದೆ.ಈ ಕ್ಷಣಕ್ಕಾಗಿ ಹಲವು ವರ್ಷಗಳಿಂದ ಶ್ರಮಿಸಿದ ಚಂದ್ರಯಾನ ತಂಡ, ಇಸ್ರೋ ಮತ್ತು ದೇಶದ ಎಲ್ಲಾ ವಿಜ್ಞಾನಿಗಳನ್ನು ನಾನು ಅಭಿನಂದಿಸುತ್ತೇನೆ ಎಂದರು.
ಈ ಹಿಂದೆ ಯಾವುದೇ ದೇಶವು ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪಿಲ್ಲ. ನಮ್ಮ ವಿಜ್ಞಾನಿಗಳ ಕಠಿಣ ಪರಿಶ್ರಮದಿಂದ ನಾವು ಅಲ್ಲಿಗೆ ತಲುಪಿದ್ದೇವೆ. ಇಂದು ನಾವು ಬಾಹ್ಯಾಕಾಶದಲ್ಲಿ ನವ ಭಾರತದ ಹೊಸ ಹಾರಾಟಕ್ಕೆ ಸಾಕ್ಷಿಯಾಗಿದ್ದೇವೆ ಎಂದು ಪ್ರಧಾನಿ ಹೇಳಿದರು.