ನವದೆಹಲಿ, ಆ 23 (DaijiworldNews/AK):ವಿಳಾಸ ಕೇಳುವ ನೆಪದಲ್ಲಿ ಡೆಲಿವರಿ ಬಾಯ್ಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ನೈಋತ್ಯ ದೆಹಲಿಯ ದ್ವಾರಕಾದಲ್ಲಿ ನಡೆದಿದೆ.
ಶುಕ್ರವಾರದಂದು ದ್ವಾರಕಾದ ಸೆಕ್ಟರ್ 23ರಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಈ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಪೊಲೀಸರ ಪ್ರಕಾರ, ಮಹಿಳೆ ಚಾಕುವಿನಿಂದ ಡೆಲಿವರಿ ಬಾಯ್ ಮೇಲೆ ಮೂರ್ನಾಲ್ಕು ಬಾರಿ ಹಲ್ಲೆ ನಡೆಸಿದ್ದಾಳೆ ಎಂದು ಹೇಳಲಾಗಿದೆ. ವೀಡಿಯೋದಲ್ಲಿ, ಮಹಿಳೆಯು ಡೆಲಿವರಿ ಬಾಯ್ಯೊಂದಿಗೆ ಮಾತನಾಡಲು ಅವನ ಹಿಂದೆ ಹೋಗುತ್ತಿರುವುದನ್ನು ವೀಡಿಯೋದಲ್ಲಿ ಸೆರೆಯಾಗಿದೆ. ಆತ ಮಾತನಾಡಲು ಹಿಂದೆ ತಿರುಗಿದಾಗ, ಆಕೆ ವೇಗವಾಗಿ ಆತನ ಕುತ್ತಿಗೆಗೆ ಚಾಕುವಿನಿಂದ ಇರಿಯುತ್ತಾಳೆ. ಅಲ್ಲದೇ ಡೆಲಿವರಿ ಬಾಯ್ ಸ್ಕೂಟರ್ ಕೀಯನ್ನು ಪೊದೆಗೆ ಎಸೆಯುತ್ತಿರುವ ದೃಶ್ಯ ಸೆರೆಯಾಗಿದೆ.
ಈ ಘಟನೆಯನ್ನು ನೋಡಿದ ಸ್ಥಳೀಯರು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಡೆಲಿವರಿ ಬಾಯ್ನ್ನು ನೆಲಕ್ಕೆ ತಳ್ಳಿ ಸ್ಕೂಟಿಯ ಟೈರ್ನ್ನು ಚಾಕುವಿನಿಂದ ಕತ್ತರಿಸಲು ಪ್ರಯತ್ನಿಸುತ್ತಾಳೆ. ಇಷ್ಟೇ ಅಲ್ಲದೇ ಸ್ಥಳಕ್ಕೆ ಬಂದ ಸ್ಥಳೀಯರಿಗೆ ಚಾಕು ತೋರಿಸಿ ಭಯಪಡಿಸಲು ಮುಂದಾಗುತ್ತಾಳೆ. ತಕ್ಷಣ ಸ್ಥಳೀಯರು ಪೊಲೀಸರಿ ವಿಚಾರ ತಿಳಿಸುತ್ತಾರೆ. ಸ್ಥಳಕ್ಕೆ ಬಂದ ಪೊಲೀಸರು ಆಕೆಯಿಂದ ಚಾಕನ್ನು ಕಸಿದುಕೊಳ್ಳುತ್ತಾರೆ.
ಈ ವೇಳೆ ಮಹಿಳೆ ತನ್ನನ್ನು ರಕ್ಷಣೆ ಮಾಡಿಕೊಳ್ಳಲು ಕೋಲು ಎತ್ತಿಕೊಂಡು ಪೊಲೀಸರ ಮತ್ತು ಸ್ಥಳೀಯರ ಕಾರುಗಳ ಮೇಲೆ ದಾಳಿ ಮಾಡುತ್ತಾಳೆ. ಬಳಿಕ ಮಹಿಳಾ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
42 ವರ್ಷದ ಈ ಮಹಿಳೆ ಡಿಡಿಎ ಫ್ಲಾಟ್ನಲ್ಲಿ ಬಾಡಿಗೆದಾರರಾಗಿ ಏಕಾಂಗಿಯಾಗಿ ವಾಸಿಸುತ್ತಿದ್ದರು ಮತ್ತು ತನ್ನ ನೆರೆಹೊರೆಯವರೊಂದಿಗೆ ಇಂತಹ ಅನೇಕ ಜಗಳಗಳನ್ನು ಮಾಡಿಕೊಂಡಿದ್ದಾರೆ. ಆದರೆ ಪೊಲೀಸರು ಈಕೆಯ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ಡೆಲಿವರಿ ಬಾಯ್ನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಡೆಲಿವರಿ ಬಾಯ್ಯಿಂದ ಮಾಹಿತಿಯನ್ನು ಪಡೆದು, ತನಿಖೆಗೆ ಪೊಲೀಸ್ ಮುಂದಾಗಿದೆ. ಮಹಿಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಹಿನ್ನಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.