ಬೆಂಗಳೂರು,ಆ 23 (DaijiworldNews/AK): ಕಾವೇರಿ ಹಾಗೂ ಮಹದಾಯಿ ಜಲವಿವಾದಗಳ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಸರ್ವಪಕ್ಷಗಳ ಸಭೆಯನ್ನು ಇಂದು ಬುಧವಾರ (ಆಗಸ್ಟ್ 23) ರಂದು ಕರೆಯಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಲಿದೆ.
ಸಭೆಗೆ ಹಾಜರಾಗಿ ತಮ್ಮ ಸಲಹೆ ನೀಡುವಂತೆ ಸಂಸದರು, ಸರ್ವಪಕ್ಷಗಳ ಮುಖಂಡರು ಹಾಗೂ ಮಾಜಿ ಮುಖ್ಯಮಂತ್ರಿಗಳಿಗೆ ಮುಖ್ಯಮಂತ್ರಿ ಕಚೇರಿಯಿಂದ ಆಹ್ವಾನ ನೀಡಲಾಗಿದೆ.
ಸಭೆಯಲ್ಲಿ ಕಾವೇರಿ ನದಿ ನೀರು ಹಂಚಿಕೆ ಬಿಕ್ಕಟ್ಟು, ಮಹದಾಯಿ ಜಲವಿವಾದ ಹಾಗೂ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಕುರಿತು ಸರ್ವಪಕ್ಷಗಳ ಸಭೆ ಕರೆಯಲಾಗಿದೆ.
ರಾಜ್ಯದ ಬಹುತೇಕ ಜಲಾಶಯಗಳಲ್ಲಿ ಕೃಷಿ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕೆ ಅಗತ್ಯವಾದ ಪ್ರಮಾಣಕ್ಕಿಂತ ಕಡಿಮೆ ನೀರಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಕೂಡ ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಗಳ ಆದೇಶ ಪಾಲನೆ ಮಾಡಬೇಕಾಗಿದೆ.
ಒಂದೆಡೆ ಕನ್ನಡಿಗರ ಹಿತರಕ್ಷಣೆ, ಇನ್ನೊಂದೆಡೆ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕಾದ ಸಂದಿಗ್ಧ ಸಮಯದಲ್ಲಿ ನಾವಿರುವುದರಿಂದ ಸರ್ವಪಕ್ಷ ಸಭೆಯಲ್ಲಿ ರಾಜ್ಯದ ಎಲ್ಲಾ ಪಕ್ಷಗಳ ಮುಖಂಡರು, ಸಂಸತ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ರಚನಾತ್ಮಕ ಸಲಹೆ, ಸಹಕಾರ ನೀಡುವ ಮೂಲಕ ನಾಡಿನ ಹಿತರಕ್ಷಣೆಗೆ ನಮ್ಮೊಂದಿಗೆ ಕೈಜೋಡಿಸುತ್ತೀರೆಂಬ ಭರವಸೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.