ಬೆಂಗಳೂರು, ಆ 22 (DaijiworldNews/SM): ಕಾವೇರಿ ನೀರು ಹಂಚಿಕೆ ವಿವಾದ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ಇಂದು ತ್ರಿಸದಸ್ಯ ಪೀಠ ರಚನೆ ಮಾಡಿದೆ.
ಕರ್ನಾಟಕಕ್ಕೆ ನೀರು ಬಿಡುವಂತೆ ಸೂಚಿಸಬೇಕು ಎಂದು ಆಗ್ರಹಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ಪ್ರತ್ಯೇಕ ಪೀಠ ರಚನೆಗೆ ನಿನ್ನೆ ಒಪ್ಪಿಗೆ ನೀಡಿತ್ತು. ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು, ನ್ಯಾಯಮೂರ್ತಿ ಬಿಆರ್ ಗವಾಯಿ, ನ್ಯಾಯಮೂರ್ತಿ ಪಿಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಬಿಕೆ ಮಿಶ್ರಾ ಅವರು ತ್ರಿ ಸದಸ್ಯ ಪೀಠದಲ್ಲಿದ್ದಾರೆ.
ಸುಪ್ರೀಂಕೋರ್ಟ್ನಲ್ಲಿ ಸಿಜೆಐ ಪೀಠದ ಮುಂದೆ ತಮಿಳುನಾಡು ಸರಕಾರ ಅರ್ಜಿ ಸಲ್ಲಿಸಿದ್ದು, ತಮಿಳುನಾಡು ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಅರ್ಜಿ ಪ್ರಸ್ತಾಪಿಸಿದ್ದರು. ಸುಪ್ರೀಂ ಕೋರ್ಟ್ 2023 ಆಗಸ್ಟ್ 14ರಿಂದ ಅನ್ವಯವಾಗುವಂತೆ ಕರ್ನಾಟಕದ ಜಲಾಶಯದಿಂದ 24,000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲು ಅದಕ್ಕೆ ನಿರ್ದೇಶಿಸುವಂತೆ ಕೋರಿದ ಮನವಿಯನ್ನು ಸೋಮವಾರ ಆಲಿಕೆ ವೇಳೆ ಪ್ರಸ್ತಾವಿಸುವಂತೆ ತಮಿಳುನಾಡು ಸರಕಾರಕ್ಕೆ ಸೂಚಿಸಿತು. ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು ಈ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಪೀಠದ ಮುಂದೆ ಕಳೆದ ಶುಕ್ರವಾರ ಪ್ರಸ್ತಾಪಿಸಿದರು.