ಪಂಜಾಬ್, ಆ 22 (DaijiworldNews/HR): ರೈತರ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ಉಂಟಾಗಿ ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಓರ್ವ ರೈತ ಮೃತಪಟ್ಟು, ಐವರು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿರುವ ಘಟನೆ ಪಂಜಾಬ್ ರಾಜ್ಯದ ಸಂಗ್ರೂರ್ ನಲ್ಲಿ ನಡೆದಿದೆ.
ಮೃತಪಟ್ಟ ರೈತನನ್ನು ಪ್ರೀತಂ ಸಿಂಗ್ ಎಂದು ಗುರುತಿಸಲಾಗಿದೆ
ಪ್ರತಿಭಟನಾನಿರತ ರೈತರನ್ನು ತಡೆಯುವುದಕ್ಕಾಗಿ ಪೊಲೀಸರು ರಾಷ್ಟ್ರೀಯ ಹೆದ್ದಾರಿ ಹಾಗೂ ಸುಂಕ ಕೇಂದ್ರವನ್ನು ಮುಚ್ಚಿದ್ದರಿಂದ ಈ ಘರ್ಷಣೆ ಸ್ಫೋಟಗೊಂಡಿದ್ದು, ಪ್ರವಾಹದಿಂದ ತಮ್ಮ ಬೆಳೆಗಳಿಗೆ ಆಗಿರುವ ಹಾನಿಗೆ ಪರಿಹಾರ ಒದಗಿಸಬೇಕು ಎಂದು ರೈತರು ಪ್ರತಿಭಟಿಸುತ್ತಿದ್ದಾರೆ.
ಇನ್ನು ಚಂಡೀಗಢದಲ್ಲಿ 16 ರೈತ ಸಂಘಟನೆಗಳು ಕರೆ ನೀಡಿರುವ ಬೃಹತ್ ಪ್ರತಿಭಟನೆಗೂ ಮುನ್ನಾ ದಿನ ಈ ಸಾಂಕೇತಿಕ ಪ್ರತಿಭಟನೆ ನಡೆದಿದೆ.
ಪ್ರತಿಭಟನಾನಿರತ ರೈತರೊಬ್ಬರು ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ಅಡಿ ಸಿಲುಕಿ ಪ್ರೀತಂ ಸಿಂಗ್ ಮೃತಪಟ್ಟಿರುವುದು ಎಂದು ಹೇಳಲಾಗಿದೆ. ಆದರೆ, ಪೊಲೀಸರು ನಮಗೆ ಸುಂಕ ಕೇಂದ್ರವನ್ನು ದಾಟಲು ಅವಕಾಶ ನೀಡಲಿಲ್ಲ. ಬದಲಿಗೆ, ನಮ್ಮನ್ನು ವಶಕ್ಕೆ ಪಡೆದು, ನಮ್ಮ ಟ್ಯಾಕ್ಟರ್ ಹಾಗೂ ಬಸ್ ಗಳನ್ನು ದೊಣ್ಣೆಗಳಿಂದ ಧ್ವಂಸಗೊಳಿಸಿದರು ಎಂದು ಪ್ರತಿಭಟನಾನಿರತ ರೈತರೊಬ್ಬರು ಹೇಳಿರುವುದಾಗಿ ವರದಿಯಾಗಿದೆ.