ಬೆಳಗಾವಿ, ಆ 22 (DaijiworldNews/HR): ಕಾಂಗ್ರೆಸ್ ತಮ್ಮ ಶಾಸಕರನ್ನು ಹೆದರಿಸಲು ಆಪರೇಷನ್ ಹಸ್ತ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನ ಬಂದಿರುವುದರಿಂದ ಬೇರೆ ಶಾಸಕರ ಅವಶ್ಯಕತೆಯಿಲ್ಲ. ಅವರ ಪಕ್ಷದಲ್ಲಿ ಪತ್ರ ಸಮರ, ಶಾಸಕರ ಜಗಳ ಸೇರಿ ಏನೆನೋ ನಡೆಯುತ್ತಿದೆ. ತಮ್ಮ ಶಾಸಕರನ್ನು ಹೆದರಿಸಲು ಈ ರೀತಿ ಮಾಡುತ್ತಿರಬಹುದು. ನೀವು ಸುಮ್ಮನಿರದಿದ್ದರೆ ಬಿಜೆಪಿ, ಜೆಡಿಎಸ್ ಶಾಸಕರನ್ನು ಕರೆ ತರುತ್ತೇವೆಂದು ಹೆದರಿಸುತ್ತಿದ್ದಾರೆ ಎಂದರು.
ಇನ್ನು ಕಾಂಗ್ರೆಸ್ ಪಕ್ಷಕ್ಕೆ ಒಬ್ಬ ಶಾಸಕನ ಅವಶ್ಯಕತೆಯೂ ಇಲ್ಲ. ಅವರೊಳಗೆ ಅಸಮಾಧಾನ, ಪತ್ರ ಸಮರ ನಡೆದಿದೆ. ಕಳೆದ ಬಾರಿ ಕುಮಾರಸ್ವಾಮಿ ಸರ್ಕಾರದಲ್ಲಿ ಮೊದಲ ತಿಂಗಳಲ್ಲೇ ಆರಂಭವಾಗಿ ಒಂದು ವರ್ಷ ನಂತರ ಸ್ಫೋಟವಾಗಿತ್ತು. ಹೀಗಾಗಿ ಕಾಂಗ್ರೆಸ್ ಮುಖಂಡರು ಈಗಲೇ ಎಚ್ಚೆತ್ತುಕೊಂಡು ತಮ್ಮ ಶಾಸಕರನ್ನು ಹೆದರಿಸುತ್ತಿದ್ದಾರೆ ಎಂದಿದ್ದಾರೆ.