ಬೆಂಗಳೂರು, ಆ 22(DaijiworldNews/AK):ರಾಜ್ಯದ ಕಾಂಗ್ರೆಸ್ ಸರಕಾರವು ಪೂರ್ವಾಪರ ವಿವೇಚನೆ ಇಲ್ಲದೆ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದೆ. ಇದು ಖಂಡನಾರ್ಹ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಭಾಗದ ರೈತರಿಗೆ ಅನ್ಯಾಯ ಮಾಡಲಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.
ರಾಜ್ಯದ ನೀರಾವರಿ ಸಚಿವರು ಮತ್ತು ಕೃಷಿ ಸಚಿವರಿಗೆ ರಾಜ್ಯದ ರೈತರ ಕುರಿತು ಕಾಳಜಿ ಇಲ್ಲ ಎಂದು ಟೀಕಿಸಿದರು. ತಮಿಳುನಾಡು ಸರಕಾರವು ರಿಟ್ ಅರ್ಜಿ ದಾಖಲಿಸಿದ ತಕ್ಷಣವೇ ಯಥೇಚ್ಛವಾಗಿ ನೀರು ಬಿಟ್ಟಿದ್ದಾರೆ. ಸುಮಾರು 12-13 ಟಿಎಂಸಿ ನೀರನ್ನು ಬಿಡಲಾಗಿದೆ ಎಂದು ಟೀಕಿಸಿದರು.
ಇವತ್ತಿನ ನೀರಾವರಿ ಸಚಿವರಿಗೆ ಜವಾಬ್ದಾರಿಯೇ ಇಲ್ಲ. ತಮಿಳುನಾಡು ಅರ್ಜಿ ಹಾಕಿದ ಕ್ಷಣ ನೀರು ಬಿಡುಗಡೆ ಮಾಡಿ, ರೈತರು ಬೇಕಿದ್ದರೆ ಸುಪ್ರೀಂ ಕೋರ್ಟಿಗೆ ಹೋಗಿ ಎಂದು ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ ಎಂದು ಟೀಕಿಸಿದರು.
ಸ್ಟಾಲಿನ್ ಜೊತೆ ಒಳ ಒಪ್ಪಂದ ಮಾಡಿಕೊಂಡು ನಮ್ಮ ರೈತರಿಗೆ ದ್ರೋಹ ಬಗೆಯದಿರಿ. ಡಿ.ಕೆ.ಶಿವಕುಮಾರ್ ಅವರು ಬ್ರ್ಯಾಂಡ್ ಬೆಂಗಳೂರು ಎಂದು ಹೇಳಿಕೊಂಡು ನೀರಾವರಿ ಇಲಾಖೆಯನ್ನು ಮರೆಯಬಾರದು ಎಂದೂ ಆಗ್ರಹಿಸಿದರು.