ನವದೆಹಲಿ, ಏ 09(MSP): ನಾವು ಎಂದೂ, ಎಲ್ಲೂ ಕೂಡಾ ಜನರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ಪಾವತಿ ಮಾಡುತ್ತೇವೆ ಎಂದು ಹೇಳಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಅವರು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಜನರ ಬ್ಯಾಂಕ್ ಖಾತೆ 15 ಲಕ್ಷ ವರ್ಗಾಯಿಸುತ್ತೇವೆ ಎಂಬ ಮಾತನ್ನು ಎಲ್ಲೂ ಹೇಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸುದ್ದಿ ಸಂಸ್ಥೆ ಐಟಿ ದಾಳಿ ನಡೆಯುತ್ತಿರುವ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ರಾಜನಾಥ್ ಸಿಂಗ್ , ಐಟಿ ದಾಳಿಗೂ ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಸರ್ಕಾರ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಕೇಂದ್ರ ಸರ್ಕಾರವೂ ಯಾವತ್ತೂ ಪ್ರಭಾವ ಬೀರಿಲ್ಲ. ಆದರೆ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಐಟಿ ದಾಳಿ ಬಗ್ಗೆ ವಿರೋಧ ಪಕ್ಷಗಳು ವೃಥಾ ಸುಳ್ಳು ಆರೋಪ ಮಾಡುತ್ತಿವೆ ಎಂದರು.
ಕಾಶ್ಮೀರ ವಿಚಾರವಾಗಿ ಮಾತನಾಡಿದ ಅವರು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಇದನ್ನು ಪ್ರತ್ಯೇಕಿಸುವ ಉದ್ದೇಶ ಇಲ್ಲ. ಕಾಶ್ಮೀರಕ್ಕಾಗಿ ಮತ್ತೊರ್ವ ಪ್ರಧಾನಿಯ ಅಗತ್ಯವೂ ಇಲ್ಲ ಎಂದರು.