ಬೆಂಗಳೂರು, ಆ 21(DaijiworldNews/AK):ಶಿಕ್ಷಣ ನೀತಿ ನಿರೂಪಣೆ ರಾಜ್ಯದ ವಿಷಯವಾಗಿದ್ದು, ಈ ಹಿನ್ನೆಲೆಯಲ್ಲಿ ಹಳೆ ಶಿಕ್ಷಣ ಪದ್ಧತಿ ಮುಂದುವರೆಸಿ, ಹೊಸ ಶಿಕ್ಷಣ ನೀತಿ ರೂಪಿಸಲು ಒಂದು ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಇಂದು ಶಿಕ್ಷಣ ನೀತಿ ಕುರಿತಂತೆ ನಡೆಸಲಾದ ಸಭೆಯಲ್ಲಿ ಅವರು , ಶಿಕ್ಷಣಕ್ಕೆ ಕೇಂದ್ರ ಸರ್ಕಾರ ನೀತಿ ರೂಪಿಸಲು ಸಾಧ್ಯವಿಲ್ಲ. ಏಕೆಂದರೆ ಅದು ರಾಜ್ಯದ ವಿಷಯ. ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಶಿಕ್ಷಣ ನೀತಿಯನ್ನು ಕೇಂದ್ರ ಹೇರಲಾಗದು. ಹೇರಲು ಹೊರಟಿರುವುದು ಒಂದು ಹುನ್ನಾರ ಎಂದರು.
ಹಳೆ ಶಿಕ್ಷಣ ಪದ್ಧತಿ ಮುಂದುವರೆಸಿ, ಹೊಸ ಶಿಕ್ಷಣ ನೀತಿ ರೂಪಿಸಲು ಒಂದು ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.ಈ ಶಿಕ್ಷಣ ನೀತಿ ಜಾರಿಗೊಳಿಸಲು ಅಗತ್ಯ ಮೂಲಸೌಲಭ್ಯಗಳು ಶಿಕ್ಷಣ ಸಂಸ್ಥೆಗಳಲ್ಲಿ ಇಲ್ಲ. ಇದರಿಂದ ಅನಗತ್ಯ ಗೊಂದಲಗಳು ಸೃಷ್ಟಿಯಾಗಿದೆ ಎಂದು ಮುಖ್ಯಮಂತ್ರಿಯವರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.