ಬೆಂಗಳೂರು, ಆ 21(DaijiworldNews/AK): ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆ ಧ್ವಂಸಗೊಳಿಸಿರುವ ದೇಶವಿರೋಧಿ ಕೃತ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ.ಈ ಕುಕೃತ್ಯದ ಹಿಂದೆ ಯಾರೇ ಇರಲಿ ಅವರನ್ನು ಹಿಡಿದು ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸುತ್ತೇವೆ ಎಂದರು.
ಈ ಕುರಿತು ಟ್ವೀಟ್ ಮಾಡಿದ ಅವರು, ಈ ನೆಲದ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆ, ಸಂವಿಧಾನ ಮತ್ತು ಕಾನೂನಿನ ಬಗೆಗೆ ಗೌರವ ಇಲ್ಲದವರು ಮಾತ್ರ ಇಂತಹ ಹೀನ ಕೃತ್ಯ ಎಸಗಲು ಸಾಧ್ಯ ಎಂದರು
ಈ ಕುಕೃತ್ಯದ ಹಿಂದೆ ಯಾರೇ ಇರಲಿ ಅವರನ್ನು ಹಿಡಿದು ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸುತ್ತೇವೆ. ಯಾರೊಬ್ಬರೂ ಈ ಬಗ್ಗೆ ಉದ್ವೇಗಕ್ಕೆ ಒಳಗಾಗಿ ಕಾನೂನು ಕೈಗೆತ್ತಿಕೊಳ್ಳದೆ, ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಲು ಸಹಕರಿಸಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.
ಶಿವಮೊಗ್ಗದ ಹೊಳೆಹೊನ್ನೂರು ಪಟ್ಟಣದ ಗಾಂಧಿ ಸರ್ಕಲ್ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಬೈಕಿನಲ್ಲಿ ಬಂದ ಇಬ್ಬರು ದುಷ್ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ವಿಚಾರ ತಿಳಿಯುತ್ತಿದ್ದಂತೆ ಜನರು ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.
ಸರ್ಕಲ್ನಲ್ಲಿ ಗಾಂಧಿ ಪ್ರತಿಮೆ, ಅದರ ಸುತ್ತಲು ಮಂಟಪ ನಿರ್ಮಿಸಲಾಗಿದೆ. ಈ ಮಂಟಪದೊಳಗಿದ್ದ ಪ್ರತಿಮೆಯನ್ನು ಧ್ವಂಸ ಮಾಡಲಾಗಿದೆ. ಕಿಡಿಗೇಡಿಗಳ ಪತ್ತೆಗಾಗಿ ಸಮೀಪದ ಸಿಸಿಟಿವಿಗಳನ್ನು ಪರಿಶೀಲಿಸಲಾಗಿದೆ. ಈ ಕೃತ್ಯ ಎಸಗಿದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.