ಬೆಂಗಳೂರು, ಎ09(SS): ರಾಜಾಜಿನಗರ ನಾಲ್ಕನೇ ಬ್ಲಾಕ್ ನಲ್ಲಿರುವ ರಾಮಮಂದಿರದಲ್ಲಿ ಸದ್ದಾಂ ಹುಸೇನ್ ದೇವಾಲಯ ಸೇರಿದಂತೆ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಈ ಮೂಲಕ ಸಣ್ಣ ಸಣ್ಣ ಘಟನೆಗಳಿಗೂ ಧರ್ಮ ಧರ್ಮದ ನಡುವೆ ಕೋಮು ಬಣ್ಣ ಹಚ್ಚುವ ಜನರಿಗೆ ಸದ್ದಾಂ ಹುಸೇನ್ ಮಾದರಿಯಾಗಿದ್ದಾರೆ.
ಅನೇಕ ವರ್ಷಗಳಿಂದ ಸದ್ದಾಂ ಹುಸೇನ್ ಯಾರೊಬ್ಬರ ಸಹಾಯಕ್ಕಾಗಿ ಕಾಯದೇ, ತಾವಾಗಿಯೇ ರಾಮಮಂದಿರದಲ್ಲಿ ಸ್ವಚ್ಛಗೊಳಿಸುವ ಕೆಲಸ ನಿರ್ವಹಿಸುತ್ತಿದ್ದಾರೆ. ತಾವು ದೇವಾಲಯ ಹೊಕ್ಕು ಅಲ್ಲಿರುವ ಏಣಿಯೊಂದನ್ನೇರಿ ಛಾವಣಿಯಲ್ಲಿರಬಹುದಾದ ಧೂಳು, ಜೇಡರ ಬಲೆಗಳಂತಹಾ ಕಸವನ್ನು ಶುಚಿಗೊಳಿಸುತ್ತಾರೆ. ಕಸ ಹೊಡೆಯುವುದು, ಬಟ್ಟೆಯಿಂದ ನೆಲ, ಗೋಡೆಗಳ ಒರೆಸುವುದನ್ನು ಅವರೊಬ್ಬರೇ ಮಾಡುತ್ತಾರೆ.
ಮಾತ್ರವಲ್ಲ, ಕಂಬದ ಮೇಲಿರುವ ರಾಮ, ಲಕ್ಷ್ಮಣ, ಸೀತಾ ಹಾಗೂ ಹನುಮನ ಮೂರ್ತಿಗಳ ಮೇಲಿನ ಧೂಳನ್ನು ಸಹ ಅವರು ನಿರ್ವಿಕಾರ ಭಾವದಿಂದ ಒರೆಸುತ್ತಾರೆ, ಹಾಗೆಯೇ ಆ ಮೂರ್ತಿಗಳು ಹೊಚ್ಚ ಹೊಸದಾಗಿ ಕಾಣುವವರೆಗೆ ಅವರು ಶುಚಿಗೊಳಿಸುತ್ತಾರೆ. ಸಂಪೂರ್ಣ ಪ್ರಾಮಾಣಿಕತೆಯಿಂದ ಸದ್ದಾಂ ಹುಸೇನ್ ಈ ಕಾರ್ಯ ನೆರವೇರಿಸುತ್ತಿದ್ದು, ಪ್ರತಿಯೊಬ್ಬರೂ ಅವರನ್ನು ಪ್ರಶಂಸಿಸುತ್ತಿದ್ದಾರೆ.
ಕೇವಲ ರಾಮಮಂದಿರವಷ್ಟೇ ಅಲ್ಲ, ಕೇವಲ ಎರಡನೇ ತರಗತಿಯವರೆಗೆ ಓದಿರುವ ಹುಸೇನ್ ಈ ಪ್ರದೇಶದ ಜನರ ಬೇರೆ ಬೇರೆ ಕೆಲಸಗಳಲ್ಲಿ ನೆರವಾಗುತ್ತಾರೆ. ಮನೆಗಳ ಕೆಲಸವಿರಬಹುದು, ಅಂಗಡಿ ಕೆಲಸವಿರಬಹುದು ಎಲ್ಲವನ್ನೂ ಒಳ್ಳೆಯ ಮನಸ್ಸಿನಿಂದ ಮಾಡುತ್ತಾರೆ. ಇವರ ತಾಯಿ ಮೆಹಬೊಬಿ ಕೂಡ ಇದೇ ದೇವಾಲಯದಲ್ಲಿ ಕೆಲಸ ಮಾಡುತ್ತಾ, ಎಲ್ಲರ ಜೊತೆ ಸಹಬಾಳ್ವೆಯ ಜೀವನ ನಡೆಸುತ್ತಿದ್ದಾರೆ.
ತನ್ನ ಧರ್ಮವನ್ನು ಪ್ರೀತಿಸುವುದರ ಜೊತೆಗೆ ಬೇರೆ ಧರ್ಮದವನ್ನು ಗೌರವಿಸುವ ಸದ್ದಾಂ ಹುಸೇನ್ ಕೆಲಸಕ್ಕೆ ಇದೀಗ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ.