ಬೆಂಗಳೂರು, ಆ 18(DaijiworldNews/MS): ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಎಸ್ಟಿ ಸೋಮಶೇಖರ್ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುಳಿವನ್ನು ಸಚಿವ ಡಾ.ಜಿ. ಪರಮೇಶ್ವರ್ ಕೊಟ್ಟ ಬೆನ್ನಲ್ಲೇ ಡಿಸಿಎಂ ಡಿಕೆಶಿ ಆಪ್ತ ಮತ್ತು ನೆಲಮಂಗಲ ಕಾಂಗ್ರೆಸ್ ಶಾಸಕ ಎನ್. ಶ್ರೀನಿವಾಸ್ ಕೂಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಯಶವಂತಪುರ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಶ್ರೀನಿವಾಸ್ ಕೂಡ ಭಾಗಿಯಾಗಿದ್ದರು. ಬೆಂಬಲಿಗರು ಕಾಂಗ್ರೆಸ್ ಸೇರುವುದಾಗಿ ಹೇಳಿದ ಮೇಲೆ ಸೋಮಶೇಖರ್ ಬಿಜೆಪಿಯಲ್ಲಿ ಇರಲು ಸಾಧ್ಯವೇ? ಹೀಗಾಗಿ, ಸೋಮಶೇಖರ್ ಕಾಂಗ್ರೆಸ್ ಸೇರುವ ನಿರೀಕ್ಷೆಯಿದ್ದು, ಸಿಎಂ ಸಿದ್ದರಾಮಯ್ಯ ಕೂಡ ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ.
ಇನ್ನು ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಕಾರ್ಪೊರೇಟರ್ ಚಿಕ್ಕರಾಜು ಮಾತನಾಡಿ, ನಮಗೆ ಇಲ್ಲಿ ಉಳಿಗಾಲವಿಲ್ಲ. ಇಲ್ಲಿ ನಮ್ಮ ವಿರುದ್ಧ ಪಿತೂರಿ ನಡೆಯುತ್ತಿದೆ. ಕಾಂಗ್ರೆಸ್ಗೆ ವಾಪಸ್ ಹೋಗೋಣ ಎಂದು ಒತ್ತಾಯಿಸಿದ್ದೇವೆ. ನಿರ್ಧಾರ ಕೈಗೊಳ್ಳಲು ಸೋಮಶೇಖರ್ ಸಮಯ ಕೇಳಿದ್ದಾರೆ. ಬಿಜೆಪಿ ಪಕ್ಷದ ವರಿಷ್ಠರ ಜೊತೆ ಮಾತಾಡಿ ಸರಿಪಡಿಸುತ್ತೇನೆ ಎಂದಿದ್ದಾರೆ. 3-4 ದಿನದಲ್ಲಿ ಸೋಮಶೇಖರ್ ತೀರ್ಮಾನ ತಿಳಿಸದಿದ್ದರೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.