ಶಿವಮೊಗ್ಗ,ಆ 16 (DaijiworldNews/AK): ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಜತೆಗೆ ವಾರದಲ್ಲಿ ಎರಡು ಬಾರಿ ಮೊಟ್ಟೆ ಅಥವಾ ಬಾಳೆ ಹಣ್ಣು ನೀಡುವ ಯೋಜನೆಯು ಆಗಸ್ಟ್ 18ರಿಂದ ಆರಂಭವಾಗಲಿದೆ.ಮಂಡ್ಯ ಜಿಲ್ಲೆಯಲ್ಲಿ ಈ ಯೋಜನೆಯು ಉದ್ಘಾಟನೆಗೊಳ್ಳಲಿದೆ ಎಂದು ಪ್ರಾಥಮಿಕ ಹಾಗೂ ಪೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಪೌಷ್ಟಿಕಾಂಶಯುಕ್ತ ಆಹಾರ ನೀಡುವ ಹಿನ್ನಲೆಯಲ್ಲಿ ಈ ಯೋಜನೆಯು ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.ವಾರದಲ್ಲಿ ಎರಡು ಬಾರಿ ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ಮೊಟ್ಟೆ ವಿತರಿಸಲಾಗುವುದು. ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗಾಗಿ ಬಾಳೆಹಣ್ಣನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಮೊದಲು 8 ನೇ ತರಗತಿಯವರೆಗೆ ಈ ಯೋಜನೆ ಜಾರಿಗೊಳಿಸಬೇಕು ಎಂದಾಗಿತ್ತು. ಆದರೆ ಈಗ ಹತ್ತನೇ ತರಗತಿವರೆಗೂ ವಿಸ್ತರಿಸಬೇಕು ಎಂಬ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯದ ವಿದ್ಯಾರ್ಥಿಗಳು ಅಪೌಷ್ಠಿಕತೆ ಹಾಗೂ ಅನೀಮಿಯಾದಿಂದ ಬಳಲುತ್ತಿರುವುದರಿಂದ ಮೊಟ್ಟೆ ಅಥವಾ ಬಾಳೆಹಣ್ಣು ವಿತರಣೆ ಅನಿವಾರ್ಯವಾಗಿದೆ ಎಂದು ಸರ್ಕಾರ ಪ್ರತಿಪಾದಿಸಿದೆ.