ಬೆಂಗಳೂರು, ಆ 16 (DaijiworldNews/MS): ನಟ ಉಪೇಂದ್ರ ಅವರು ಹಳೇ ಗಾದೆ ಬಳಸಿಸಂಕಷ್ಟಕ್ಕೆ ಸಿಲುಕಿದಂತೆ, ದಲಿತ ಸಮುದಾಯದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ತೋಟಗಾರಿಕಾ ಸಚಿವ ಎಸ್ಎಸ್ ಮಲ್ಲಿಕಾರ್ಜುನ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಗೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮುಖಂಡ ಎಂ ದಿವಾಕರ್ ದೂರು ನೀಡಿದ್ದಾರೆ.
ಉಪೇಂದ್ರ ಬಳಸಿದ್ದ ಪದವನ್ನೇ ಬಳಸಿ ಸಚಿವ ಎಂಬಿ ಪಾಟೀಲ್ ಮಾಡಿದ್ದ ಟ್ವೀಟ್ ವೈರಲ್ ಆಗಿದೆ. ಈ ದೂರಿನ ಆಧಾರದ ಮೇಲೆ ರಾಜಾಜಿನಗರ ಠಾಣೆ ಪೊಲೀಸರು ಎನ್ಸಿಆರ್ ದಾಖಲಿಸಿದ್ದು, ಪ್ರಕರಣವನ್ನು ವಿಧಾನಸೌಧ ಪೊಲೀಸ್ ಠಾಣೆಗೆ ವರ್ಗಾಯಿಸುವ ಪ್ರಕ್ರಿಯೆ ನಡೆದಿದೆ ಎಂದು ತಿಳಿದುಬಂದಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್, ಒಂದು ಸಮುದಾಯದ ಬಗ್ಗೆ ಕೀಳಾಗಿ ಮಾತನಾಡುವುದು ನಿಲ್ಲಿಸಬೇಕು. ನಾಣ್ಣುಡಿ ಇದೆ ಅಂತ ಹೇಳಿ ಕೀಳಾಗಿ ಮಾತನಾಡುವುದು ಸರಿಯಲ್ಲ. ಇದನ್ನು ನಿಲ್ಲಿಸಿದರೆ ಒಳ್ಳೆಯದು, ಇಂತಹ ಹೇಳಿಕೆಗಳನ್ನು ನಾನು ಸಹಿಸಲ್ಲ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಏನ್ ಮಾತನಾಡಿದ್ದಾರೆ ಗೊತ್ತಿಲ್ಲ. ಎರಡೂ ಪ್ರಕರಣಗಳ ಬಗ್ಗೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.