ಆಂಧ್ರಪ್ರದೇಶ, ಆ 16 (DaijiworldNews/AK): ತಿರುಮಲದ ತಿರುಪತಿ ದೇವಾಲಯದ ಎಲ್ಲಾ ನೌಕರರಿಗೆ ಮನೆ ನಿವೇಶ ಮಂಜೂರು ಮಾಡುವುದಾಗಿ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದಾರೆ.
ವಡಮಾಲ ಪೇಟೆಯಲ್ಲಿ ನೌಕರರ ವಸತಿಗಾಗಿ ಮಂಜೂರಾದ 310 ಎಕರೆ ಜಮೀನು ಪರಿಶೀಲನೆಯನ್ನು ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಅವರು ನಡೆಸಿದರು.
ಬಳಿಕ ಮಾಧ್ಯಮದವರೊಂದಿಗೆ ಅವರು., ಸೆಪ್ಟೆಂಬರ್ 18 ರಂದು ಮುಖ್ಯಮಂತ್ರಿ ಜಗನ್ ಮೋಹನ್ ಅವರ ಕೈಯಿಂದ ಮನೆ ನಿವೇಶನ ವಿತರಣೆಗೆ ಚಾಲನೆ ನೀಡಲಾಗುವುದು. ಅಗತ್ಯವಿದ್ದಲ್ಲಿ ಇನ್ನೂ 100 ಎಕರೆಯನ್ನು ಆಡಳಿತಾರೂಢ ಸರಕಾರದಿಂದ ಸಂಗ್ರಹಿಸಿ ಎಲ್ಲರಿಗೂ ಮನೆ ನಿವೇಶನ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು.
ಇದೇ ವೇಳೆ ಎಲ್ಲಾ ಟಿಟಿಡಿ ನೌಕರರಿಗೆ ಗೃಹ ನಿರ್ಮಾಣಕ್ಕಾಗಿ ನಿವೇಶನ ನೀಡುವ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.
ಮಂಗಳವಾರ ಟಿಟಿಡಿ ಪ್ರಧಾನ ಕಾರ್ಯನಿರ್ವಹಣಾಧಿಕಾರಿ ಎ.ವಿ. ಧರ್ಮಾ ರೆಡ್ಡಿ, ಜೆಇಒ ಸದಾ ಭಾರ್ಗವಿ ಹಾಗೂ ಸಂಘದ ಮುಖಂಡರೊಂದಿಗೆ ವಡಮಾಲ ಪೇಟೆಯಲ್ಲಿ ನೌಕರರ ವಸತಿಗಾಗಿ ಮಂಜೂರಾದ 310 ಎಕರೆ ಜಮೀನು ಪರಿಶೀಲನೆಯನ್ನು ಅವರು ನಡೆಸಿದರು.
ದಿವಂಗತ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ್ ರೆಡ್ಡಿ ಅವರ ಅವಧಿಯಲ್ಲಿ ಅವರ ಪ್ರಯತ್ನದಿಂದ ನೌಕರರಿಗೆ ಮನೆ ನೀಡುವ ಪ್ರಕ್ರಿಯೆ ಆರಂಭವಾಗಿದೆ ಎಂದರು. ಹತ್ತು ವರ್ಷಗಳಿಂದ ಈ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗಿತ್ತು . ಜಗನ್ ಮೋಹನ್ ಮುಖ್ಯಮಂತ್ರಿ ಆಗಿರುವುದರಿಂದ ಎಲ್ಲ ನೌಕರರಿಗೂ ಮನೆ ನಿವೇಶನಗಳು ಸಿಗುತ್ತಿವೆ ಎಂಬುದನ್ನು ನೆನಪಿನಲ್ಲಿಡಬೇಕು ಎಂದರು.
ಇನ್ನೊಂದೆಡೆ 35 X 55 ಅಡಿ ಅಳೆತೆಯ ಮನೆ ನಿವೇಶನ ನೀಡಲಾಗುವುದು ಟಿಟಿಡಿ ಪ್ರಧಾನ ಕಾರ್ಯನಿರ್ವಹಣಾಧಿಕಾರಿ ಧರ್ಮ ರೆಡ್ಡಿ ಪ್ರಕಟಿಸಿದರು. ಸುಮಾರು 7 ಸಾವಿರ ಉದ್ಯೋಗಿಗಳಿಗೆ ಇಲ್ಲಿ ಮನೆ ಸಿಗಲಿದೆ. ಇದರಿಂದ ದೊಡ್ಡ ಟೌನ್ ಶಿಪ್ ನಿರ್ಮಾಣವಾಗಲಿದೆ ಎಂದರು. ಚೆನ್ನೈ ಹೆದ್ದಾರಿಯ ಪಕ್ಕದಲ್ಲಿರುವ ಈ ಸ್ಥಳವು ಉತ್ತಮ ಮೌಲ್ಯ ಹೊಂದಿದೆ ಎಂದು ಹೇಳಲಾಗುತ್ತಿದೆ. ಟಿಟಿಡಿ ಅಧ್ಯಕ್ಷರ ಆದೇಶದನ್ವಯ ಸೆ. 18ರೊಳಗೆ ಈ ಜಾಗವನ್ನು ಪ್ಲಾಟ್ಗಳಾಗಿ ವಿಂಗಡಿಸಿ ಡಾಂಬರೀಕರಣ ಮಾಡಿದ ರಸ್ತೆಗಳನ್ನು ಹಾಕಿಕೊಡಲು ಪ್ರಯತ್ನಿಸಲಾಗುವುದು ಎಂದರು.