ಚಿಕ್ಕಮಗಳೂರು, ಆ 16 (DaijiworldNews/MS): ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಿಸಲು ಆದೇಶಿಸಲಾಗಿದ್ದು, ಕೆಲವೇ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಸುಧಾರಣೆಯಾಗಲಿದೆ ಎಂದು ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿ, ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಬಂದ ಮಳೆಗೆ ನಮ್ಮ ರಾಜ್ಯಕ್ಕೆ ಬರಬೇಕಾಗಿರುವ ಕಲ್ಲಿದ್ದಲು ಒದ್ದೆಯಾಗಿ ಹಾಳಾಗಿದೆ. ಹೀಗಾಗಿ, ಅದರ ಗುಣಮಟ್ಟ ಹೆಚ್ಚಿಸಬೇಕಾಗಿದೆ. ಇದು ಒಂದು ದಿನದಲ್ಲಿ ಮುಗಿಯುವ ಕೆಲಸ ಅಲ್ಲ. ಹೀಗಾಗಿ, ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿತ್ತು.
ಜತೆಗೆ ಮಳೆಗಾಲದಲ್ಲಿ ಸ್ಥಾವರದ ದುರಸ್ತಿ ಕೆಲಸವೂ ಮಾಡಲಾಗುತ್ತಿದ್ದು, ಈ ಕಾರಣಕ್ಕೆ ವಿದ್ಯುತ್ ಉತ್ಪಾದನೆ ಕ್ಷೀಣಿಸಿ ಸಮಸ್ಯೆ ಎದುರಾಗಿದ್ದು, ಈಗ ಪರಿಸ್ಥಿತಿ ಸುಧಾರಿಸಿದೆ ಎಂದರು. ಮಳೆ ಕಡಿಮೆಯಾಗಿದ್ದರಿಂದ ಕೂಡಲೇ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಎರಡು ದಿನಗಳ ಹಿಂದೆ ಆದೇಶ ನೀಡಲಾಗಿದೆ ಎಂದು ಹೇಳಿದ್ದಾರೆ.