ಬೆಂಗಳೂರು, ಆ 16 (DaijiworldNews/MS): ಕಳೆದ ಬಾರಿ ಬಿಜೆಪಿ ಸೇರಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಬಾಂಬೆ ಬಾಯ್ಸ್ ಶಾಸಕರು ಶೀಘ್ರ ಫರ್ ವಾಪ್ಸಿ ಮಾಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ಉಂಟಾಗಲಿದೆ ಎಂದು ವರದಿಯಾಗಿದೆ.
ಆ ಪೈಕಿ ಐವರು ಹಾಲಿ ಶಾಸಕರು ಬಿಜೆಪಿಗೆ ರಾಜೀನಾಮೆ ಕೊಟ್ಟು ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಶಾಸಕರು ತಮ್ಮ ಕ್ಷೇತ್ರದ ಹಿತದೃಷ್ಟಿಯಿಂದ ಬಿಜೆಪಿ ತೊರೆಯಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಮೂವರ ಮತ್ತು ಉತ್ತರ ಕನ್ನಡದ ಒಬ್ಬರು ಪಕ್ಷಾಂತರಕ್ಕೆ ಆಸಕ್ತಿ ಹೊಂದಿದ್ದು, ರಾಜ್ಯ ಕಾಂಗ್ರೆಸ್ ನಾಯಕರಿಂದ ಒಂದು ಸುತ್ತಿನ ಮಾತುಕತೆ ಯಶಸ್ವಿ ಕೂಡ ಆಗಿದೆ. ಹೈಕಮಾಂಡ್ ಸಹ ಈ ಶಾಸಕರ ಸೇರ್ಪಡೆಗೆ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 20 ಸೀಟು ಗೆಲ್ಲುವ ಉದ್ದೇಶ ಹೊಂದಿರುವ ಕೈ ನಾಯಕತ್ವವು ಪಕ್ಷ ಸೇರ್ಪಡೆಗೆ ಆಸಕ್ತಿ ಹೊಂದಿರುವ ಬಿಜೆಪಿ ಹಾಗೂ ಜೆಡಿಎಸ್ನ ಹಲವು ಶಾಸಕರ ಸೆಳೆಯುವ ಯತ್ನ ಮಾಡಿತ್ತು.