ಶಿವಮೊಗ್ಗ, ಆ 15 (DaijiworldNews/HR): ಬಿಜೆಪಿ ಶಾಸಕ ಬಸವನಗೌಡ ಆರ್ ಪಾಟೀಲ್ ಯತ್ನಾಳ್ ಅವರಿಗೆ ಈ ಬಸ್ ಸ್ಟ್ಯಾಂಡ್ ನಲ್ಲಿ ಜಾಗ ಖಾಲಿಯಿದೆ. ಅಲ್ಲಿ ಗಿಣಿ ಶಾಸ್ತ್ರ ಹೇಳಲಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
ಆರು ತಿಂಗಳಲ್ಲಿ ಸರ್ಕಾರ ಬೀಳುತ್ತದೆ ಎಂದಿರುವ ಯತ್ನಾಳ್ ವಿರುದ್ದ ವಾಗ್ದಾಳಿ ನಡೆಸಿರುವ ಅವರು, ಯತ್ನಾಳ್ ಅವರಿಗೆ ಈ ಬಸ್ ಸ್ಟ್ಯಾಂಡ್ ನಲ್ಲಿ ಜಾಗ ಖಾಲಿಯಿದೆ. ಅಲ್ಲಿ ಗಿಣಿ ಶಾಸ್ತ್ರ ಹೇಳಲಿ ಎಂದಿದ್ದಾರೆ.
ಇನ್ನು ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವಾಗ ಸಾಕ್ಷ್ಯಾಧಾರ ನೀಡಲಿ. ಸುಮ್ಮನೆ ಆರೋಪ ಮಾಡುವುದು ಬೇಡ. ಸಿಎಂ ಸಹ ಇದನ್ನೇ ಹೇಳಿದ್ದಾರೆ ಎಂದರು.
ಹೊಸ ಸರ್ಕಾರ ಬಂದ ನಂತರ ಗ್ಯಾರಂಟಿ ಮೂಲಕ ಯೋಜನೆ ಜಾರಿಗೊಳಿಸುತ್ತಿದ್ದು, ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹೊಸ ಸರ್ಕಾರ ಬಂದಾಗ ಆಸೆ ಹಾಗೂ ಕಾರ್ಯಕ್ರಮದ ನಿರೀಕ್ಷೆ ಇರುತ್ತದೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಶೀಘ್ರವಾಗಿ ಈಡೇರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.