ನವದೆಹಲಿ,ಆ 15 (DaijiworldNews/AK): ಇಂದು 77 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂದಿನ ವರ್ಷ ಕೆಂಪುಕೋಟೆಯಲ್ಲಿ ಸಿಗುತ್ತೇವೆ ಎಂಬ ಮಾತಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ನರೇಂದ್ರ ಮೋದಿ ಮನೆಯಲ್ಲಿ ಧ್ವಜಾರೋಹಣ ಮಾಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಪ್ರಧಾನಿಯವರ ಹೇಳಿಕೆಗಳು ಅವರ ದುರಹಂಕಾರವನ್ನು ತೋರಿಸುತ್ತದೆ. ಮುಂದಿನ ವರ್ಷವೂ ನರೇಂದ್ರ ಮೋದಿ ಅವರು ಧ್ವಜಾರೋಹಣ ಮಾಡುತ್ತಾರೆ. ಆದರೆ ಅವರು ಅವರ ಮನೆಯಲ್ಲಿ ಧ್ವಜಾರೋಹಣ ಮಾಡುತ್ತಾರೆ ಎಂದು ಖರ್ಗೆ ಹೇಳಿದರು.
ದೆಹಲಿಯ ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮುಂದಿನ ವರ್ಷ ಇದೇ ಕೆಂಪು ಕೋಟೆಯಿಂದ ಆಗಸ್ಟ್ 15 ರಂದು, ನಾನು ರಾಷ್ಟ್ರವು ಸಾಧಿಸಿದ ಪ್ರಗತಿಯನ್ನು ಪಟ್ಟಿ ಮಾಡುತ್ತೇನೆ. ಹೆಚ್ಚಿನ ಆತ್ಮವಿಶ್ವಾಸದಿಂದ ನಿಮ್ಮ ಶಕ್ತಿ, ನಿಮ್ಮ ಸಂಕಲ್ಪ ಮತ್ತು ನಿಮ್ಮ ಯಶಸ್ಸಿಗೆ ಕೆಲಸ ಮಾಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ನಿಮ್ಮನ್ನು ಗೆಲ್ಲಿಸುವುದು ಅಥವಾ ಸೋಲಿಸುವುದು ಜನರ ಕೈಯಲ್ಲಿದೆ. ಮುಂದಿನ ವರ್ಷ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡುತ್ತೇನೆ ಎಂದು ಈಗಲೇ ಹೇಳುವುದು ಅವರ ದುರಹಂಕಾರ ಎಂದು ಕಿಡಿಕಾರಿದ್ದಾರೆ