ಮುಂಬೈ, ಆ 15 (DaijiworldNews/MS):: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಭಾರತೀಯ ಪೌರತ್ವ ಪಡೆದಿದ್ದು, ಈ ಮೂಲಕ ಅಧಿಕೃತವಾಗಿ ಭಾರತೀಯ ಪ್ರಜೆಯಾಗಿದ್ದಾರೆ. ಕೆನಡಾ ಪೌರತ್ವವನ್ನು ತ್ಯಜಿಸಿ ಭಾರತೀಯ ಪೌರತ್ವ ಹಾಗೂ ಪಾಸ್ ಪೋರ್ಟ್ನ್ನು ಮರಳಿ ಪಡೆದುಕೊಂಡಿದ್ದಾರೆ.
90ರ ದಶಕದಲ್ಲಿ ತಮ್ಮ 15 ಸಿನಿಮಾಗಳು ನಿರಂತರವಾಗಿ ಫ್ಲಾಪ್ ಆದ ಮೇಲೆ ಸಿನಿಮಾ ಕೈ ಹಿಡಿಯುತ್ತಿಲ್ಲ. ಬಾಲಿವುಡ್ ಬಿಟ್ಟು ಬೇರೆ ಕೆಲಸ ಮಾಡಬೇಕೆನಿಸಿತು. ಸ್ನೇಹಿತರೊಬ್ಬರ ಸಲಹೆಯಂತೆ ಕೆನಡಾಕ್ಕೆ ತೆರಳಿ ಅಲ್ಲಿನ ಪೌರತ್ವ ಪಡೆದುಕೊಂಡಿದ್ದರು. ಇದಾದ ಬಳಿಕ ಅವರ ಒಂದೊಂದೇ ಸಿನಿಮಾಗಳು ಹಿಟ್ ಆಗುತ್ತಾ ಹೋಯಿತು. ಆ ಕಾರಣದಿಂದ ಅವರು ಮತ್ತೆ ಭಾರತಕ್ಕೆ ಬಂದಿದ್ದರು. ಅಕ್ಷಯ್ ಕುಮಾರ್ 2019 ರಲ್ಲೇ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋವಿಡ್ ಕಾರಣದಿಂದ ಅವರ ಪೌರತ್ವ ಹಾಗೂ ಪಾಸ್ ಪೋರ್ಟ್ ಪ್ರಕ್ರಿಯೆ ವಿಳಂಬವಾಗಿತ್ತು.
ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ಭಾರತೀಯ ಪೌರತ್ವ ಸಿಕ್ಕಿರುವ ಬಗ್ಗೆ ನಟ ಅಕ್ಷಯ್ ಕುಮಾರ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮನಸ್ಸು ಮತ್ತು ಪೌರತ್ವ ಎರಡೂ ಹಿಂದೂಸ್ತಾನಿ, ಸ್ವಾತಂತ್ರ್ಯ ದಿನದ ಶುಭಾಶಯಗಳು, ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.
ಪ್ರಸ್ತುತ ಅಕ್ಷಯ್ ಕುಮಾರ್ ಅವರ ʼಓಮೈಗಾಡ್-2” ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಕಾಣುವುದರ ಜೊತೆಗೆ ಪ್ರೇಕ್ಷಕರ ಮನಗೆದ್ದಿದೆ.