ಬೆಂಗಳೂರು, ಆ 15 (DaijiworldNews/AK): ದೇಶದ ಆರ್ಥಿಕತೆ ಮೂರನೇ ಸ್ಥಾನದಲ್ಲಿದೆ ಅಂದರೆ ಅದಕ್ಕೆ ಪ್ರಜೆಗಳು ಕಾರಣವೇ ಹೊರತು ಸರ್ಕಾರವಲ್ಲ. ಈಗ ಈಸ್ಟ್ ಇಂಡಿಯಾ ಕಂಪನಿಗಳು ಈಗ ಭಾರತದಲ್ಲೇ ಹುಟ್ಟಿಕೊಂಡಿವೆ. ಎರಡು ರಾಷ್ಟ್ರೀಯ ಪಕ್ಷಗಳು ಅದರ ಸ್ಥಾನ ತುಂಬುತ್ತಿವೆ. ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದರೂ ಮೌನವಾಗಿ ನೋಡುವ ಸ್ಥಿತಿ ಎದುರಾಗಿದೆ. ಹೀಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಕಾರ್ಯಕರ್ತರು ಹೋರಾಟ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಕರೆ ನೀಡಿದರು.
ಜೆಡಿಎಸ್ ಕಚೇರಿ ಜೆ.ಪಿ ಭವನದಲ್ಲಿ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ಡಿ ಕುಮಾರಸ್ವಾಮಿ ಭಾಗವಹಿಸಿದ್ದರು.
77ನೇ ಸ್ವಾತಂತ್ರತ್ಯೋತ್ಸವನ್ನು ಕಚೇರಿಯಲ್ಲಿ ಆಚರಿಸಿಕೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಬ್ರಿಟಿಷರು, ದೇಶವನ್ನು ತಮ್ಮ ಆಳ್ವಿಕೆಯಲ್ಲಿ ಇಟ್ಟುಕೊಂಡಿದ್ದರು, ಅನೇಕರ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದರೂ, ಬ್ರಿಟಿಷರು ಭಾರತವನ್ನು ಮುಕ್ತಗೊಳಿಸುವುದಕ್ಕೆ ಒಪ್ಪಿರಲಿಲ್ಲ. ಇಂತಹ ಅನಿವಾರ್ಯ ಸಂದರ್ಭದಲ್ಲಿ ದೇಶ ವಿಭಜನೆಯ ಸಮಸ್ಯೆಯನ್ನೂ ಅನುಭವಿಸಿತು ಎಂದರು.
ಬಿ.ಆರ್. ಅಂಬೇಡ್ಕರ್ರವರ ಅಧ್ಯಕ್ಷತೆಯಲ್ಲಿ ರಚನೆಯಾದ ಸಂವಿಧಾನ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಿದ್ದರಿಂದ ಈಗ ಎಲ್ಲರೂ ಸಮಾನತೆಯ ಬದುಕನ್ನು ನಡೆಸಲು ಸಾಧ್ಯವಾಗುತ್ತಿವೆ. ಆದ್ರೆ ಈಗ ಗ್ಯಾರಂಟಿ ಯೋಜನೆಗಳು ಸಮಾನತೆ ತರುತ್ತಿವೆ ಎಂದು ಹೇಳುತ್ತಿದೆ, ದುಡಿಯುವ ಕೈಗಳಿಗೆ ಶಕ್ತಿ ತುಂಬದ ಯೋಜನೆಗಳು ಯಾವ ರೀತಿ ಸಮಾನತೆ ತರುತ್ತಿವೆ ಎಂದು ಪ್ರಶ್ನಿಸಿದರು.
ಮಧ್ಯಪ್ರದೇಶದಲ್ಲಿ 40% ಸರ್ಕಾರ ಕಾಂಗ್ರೆಸ್ ಬೋರ್ಡ್ ಹಾಕಿಕೊಂಡು ಪ್ರಚಾರ ಮಾಡುತ್ತಿದೆ. ರಾಜ್ಯದಲ್ಲಿಯೂ ಇದೇ ರೀತಿ ಪೋಸ್ಟರ್ ಬಳಸಿ ಅಧಿಕಾರಕ್ಕೆ ಬಂದರೂ, ಈಗ ‘ದಾಖಲೆ ನೀಡಿ’ ಎಂದು ಹೊಸ ಖ್ಯಾತೆ ತೆಗೆದಿದೆ ಎಂದು ಕಿಡಿಕಾರಿದರು.