ಬೆಂಗಳೂರು, ಆ 14 (DaijiworldNews/AK): ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ವಕ್ತಾರರಂತೆ ಮಾತಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೆಪಿಸಿಸಿ ನೂತನ ಕಟ್ಟಡದಲ್ಲಿ ನಡೆಯುತ್ತಿರುವ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪಕ್ಷವನ್ನು ಮರೆತುಬಿಟ್ಟಿದ್ದಾರೆ. ಬಿಜೆಪಿ ವಕ್ತಾರರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅವರೊಂಥರಾ ಹಿಟ್ ಆಂಡ್ ರನ್ ಗಿರಾಕಿ. ಖಾಲಿ ಪೆನ್ ಡ್ರೈವ್ ಜೇಬಿಂದ ತೆಗೆಯೋದು ಒಳಗಿಟ್ಟುಕೊಂಡು ಹೋಗೋದು. ಇದೇ ಆಗೋಯ್ತು ಎಂದು ದೂರಿದರು.
ನಮ್ಮ ಸರ್ಕಾರ ಬಂದ ಕೂಡಲೇ ವರ್ಗಾವಣೆ ದಂಧೆ ಆರೋಪ ಮಾಡಿದರು. ಯಾಕೆ ನಿಮ್ಮ ಕಾಲದಲ್ಲಿ ವರ್ಗಾವಣೆಗಳು ನಡೆದೇ ಇಲ್ವಾ ಎಂದು ಪ್ರಶ್ನಿಸಿದರು.
ಸಚಿವ ಚೆಲುವರಾಯಸ್ವಾಮಿ ಸದನದಲ್ಲೇ ಹೆಚ್ಡಿ ಕುಮಾರಸ್ವಾಮಿ ಅವರ ಅವಧಿಯಲ್ಲಿನ ವರ್ಗಾವಣೆ ಬಗ್ಗೆ ಎಲ್ಲಾ ಮಾಹಿತಿ ಬಿಚ್ಚಿಟ್ಟಿದ್ದಾರೆ. ಅವರು ಯಾವಾಗಲೂ ಹಿಟ್ ಆ್ಯಂಡ್ ರನ್ ಹೇಳಿಕೆ ನೀಡುತ್ತಾರೆ ಎಂದು ಹೇಳಿದರು.
ಬಿಜೆಪಿಯವರಿಗೆ ತನಿಖೆಗಳಿಂದ ನಡುಕ ಶುರುವಾಗಿದೆ. ಭಂಡತನದಿಂದ ಮಾತನಾಡುತ್ತಿದ್ದವರಿಗೆ ಈಗ ಭಯ ಶುರುವಾಗಿದೆ. ತನಿಖಾ ವರದಿಗಳು ಬರಲಿ ಗೊತ್ತಾಗಲಿದೆ ಎಂದರು.
ರಾಜ್ಯದಲ್ಲಿ ಮುಂದಿನ ವರ್ಷದಿಂದ ಹೊಸ ಶಿಕ್ಷಣ ನೀತಿ ಜಾರಿ ಮಾಡಲಾಗುವುದು. ಈ ವರ್ಷ ಶಿಕ್ಷಣ ನೀತಿ ಜಾರಿಗೊಳಿಸಲು ಸ್ವಲ್ಪ ತಡವಾಯಿತು. ಹಾಗಾಗಿ ಮುಂದಿನ ವರ್ಷದಿಂದ ಹೊಸ ಶಿಕ್ಷಣ ನೀತಿ ಜಾರಿಗೆ ತರುತ್ತೇವೆ. ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ NEP ಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಸಂಪೂರ್ಣ ರದ್ದುಗೊಳಿಸಲಾಗುವುದು ಎಂದರು.