ರಾಯಚೂರು,ಆ 12 (DaijiworldNews/AK): ದುಪ್ಪಟ್ಟು ಹಣದ ಆಸೆಗೆ ಆನ್ಲೈನ್ ಗೇಮ್ ಆ್ಯಪ್ಗಳಿಂದ ಯುವಕನೋರ್ವ ಸುಮಾರು 79 ಲಕ್ಷ ರೂ. ಹಣ ಕಳೆದುಕೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರಿನ ಲಿಂಗಸುಗೂರಿನ ಮುದಗಲ್ ನಿವಾಸಿ ಸಹದೇವಪ್ಪ ಹಣ ಕಳೆದುಕೊಂಡ ಯುವಕ. ದುಪ್ಪಟ್ಟು ಹಣದ ಆಸೆಗೆ ಸುಮಾರು 79 ಲಕ್ಷ ರೂ. ಕಳೆದುಕೊಂಡು, 18 ಎಕರೆ ಜಮೀನು ಸಹ ಮಾರಾಟಮಾಡಿದ್ದಾನೆ ಎನ್ನಲಾಗಿದೆ.
ರಮ್ಮಿ, ಕ್ರಿಕೆಟ್, ಕ್ಯಾಸಿನೋ ಸೇರಿ ಇತರೆ ಆಟಗಳಿಗೆ ದುಡ್ಡು ಕಟ್ಟಿ ದಿವಾಳಿಯಾಗಿದ್ದು, ಆನ್ಲೈನ್ ಆ್ಯಪ್ಗಳು ಹಾಗೂ ಅವುಗಳ ಡೀಲರ್ಗಳಿಂದ ವಂಚನೆಗೆ ಒಳಗಾಗಿದ್ದಾನೆ. ಆ್ಯಪ್ ಡೀಲರ್ ಮೈನುದ್ದೀನ್, ಚನ್ನಬಸವ, ರುದ್ರಗೌಡ, ಹನುಮನಗೌಡ ಅವರಿಂದ ವಂಚನೆಯಾಗಿದೆ ಎಂದು ಆರೋಪಿಸಿದ್ದಾನೆ.
ಹಣ ಪಡೆದು ಲಾಗಿನ್ ಐಡಿ, ಪಾಸ್ ವರ್ಡ್ ಕೊಡುತ್ತಿದ್ದ ಡೀಲರ್ಗಳು ಹಣ ದುಪ್ಪಟ್ಟು ಮಾಡಿಕೊಡುವ ಆಸೆ ತೋರಿಸಿ ವಂಚನೆ ಮಾಡಿದ್ದಾರೆ.
2014ರಿಂದ ಇಲ್ಲಿಯವರೆಗೆ ಆನ್ಲೈನ್ ಗೇಮ್ಗಳ ಮೇಲೆ ಲಕ್ಷಾಂತರ ರೂ. ಸುರಿದ ಯುವಕ ನ್ಯಾಯಕ್ಕಾಗಿ ರಾಯಚೂರು ಎಸ್ಪಿಗೆ ದೂರು ನೀಡಿ ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಟ್ಟಿಂಗ್ ದಂಧೆಯ ದೊಡ್ಡ ಜಾಲದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾನೆ.