ಬೆಳಗಾವಿ, ಆ 11(DaijiworldNews/MS): ಬೆಳಗಾವಿಯ ಶಾಹುನಗರದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು ವಿದ್ಯುತ್ ಪ್ರವಹಿಸಿ ವೃದ್ದ ದಂಪತಿ, ಮೊಮ್ಮಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಪತಿ ಈರಪ್ಪ ರಾಠೋಡ(53), ಪತ್ನಿ ಶಾಂತವ್ವ ರಾಠೋಡ(45), ಮೊಮ್ಮಗಳು ಅನ್ನಪೂರ್ಣಾ ರಾಠೋಡ(8) ಮೃತ ದುರ್ದೈವಿಗಳು.
ನಿರ್ಮಾಣ ಹಂತದ ಕಟ್ಟಡದಲ್ಲಿ ವಾಚ್ಮನ್ ಆಗಿದ್ದ ಈರಪ್ಪನವರು ಮೋಟರ್ ಆನ್ ಮಾಡಲು ಹೋಗಿದ್ದಾಗ ವಿದ್ಯುತ್ ಶಾಕ್ ಹೊಡೆದಿದೆ. ಈ ವೇಳೆ ವಿದ್ಯುತ್ ಪ್ರವಹಿಸಿ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದ ಪತಿರ ರಕ್ಷಣೆಗೆ ಹೋದ ಪತ್ನಿ ಶಾಂತವ್ವ, ಮೊಮ್ಮಗಳು ಅನ್ನಪೂರ್ಣಾ ಸಹ ಮೃತಪಟ್ಟಿದ್ದಾರೆ.
ಮೊಮ್ಮಗಳಾದ ಅನ್ನಪೂರ್ಣಳನ್ನು ಶಿಕ್ಷಣಕ್ಕಾಗಿ ತಮ್ಮ ಬಳಿ ಇಟ್ಟುಕೊಂಡಿದ್ದರು. ಶಾಹುನಗರದ ಸರ್ಕಾರಿ ಕನ್ನಡ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಬಾಲಕಿ ಅನ್ನಪೂರ್ಣ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ ಆದರೆ, ಇದೀಗ ಮೂವರೂ ಪ್ರಾಣ ಕಳೆದುಕೊಂಡಿದ್ದಾರೆ. ಮೂವರೂ ಸಾವನ್ನಪ್ಪಿದ ಸುದ್ದಿ ಕೇಳಿ ತಾಂಡಾದಿಂದ ಬಂಧುಗಳು ಧಾವಿಸಿ ಬಂದಿದ್ದು ಆಕ್ರಂದನ ಮುಗಿಲು ಮುಟ್ಟಿದೆ.