ನಾಗ್ಪುರ,ಆ 12 (DaijiworldNews/AK): ನಾಗ್ಪುರದ ಬಿಜೆಪಿ ನಾಯಕಿ ಸನಾ ಖಾನ್ ಹತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ಪತಿ ಅಮಿತ್ ಸಾಹು ಅವರನ್ನು ಮಧ್ಯಪ್ರದೇಶದ ಜಬಲ್ಪುರದಲ್ಲಿ ನಾಗ್ಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಪತ್ನಿಯನ್ನು ಕೊಂದಿರುವ ಬಗ್ಗೆ ಅಮಿತ್ ಸಾಹು ಒಪ್ಪಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಲ್ಪುರದ ಘೋರಾ ಬಜಾರ್ ಪ್ರದೇಶದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಪೊಲೀಸ್ ವರದಿ ಪ್ರಕಾರ ಅಮಿತ್ ಸಾಹು ಅವರು ಸನಾ ಖಾನ್ ಅವರನ್ನು ಕೊಂದು ದೇಹವನ್ನು ನದಿಗೆ ಎಸೆದಿದ್ದರೆ. ಆದರೆ, ಅವರ ದೇಹ ಇನ್ನು ಪತ್ತೆಯಾಗಿಲ್ಲ. ಮೃತದೇಹವನ್ನು ಪತ್ತೆ ಮಾಡುವ ಕಾರ್ಯಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಆಗಸ್ಟ್ 1 ರಂದು ಸನಾ ಖಾನ್ ಅವರು ಜಬಲ್ಪುರಕ್ಕೆ ಹೋಗಿದ್ದಾರೆ. ಅಲ್ಲಿ ಅವರು ಅಮಿತ್ ಸಾಹು ಅವರನ್ನು ಭೇಟಿಯಾಗಿದ್ದಾರೆ. ಕೊನೆಯಾದಾಗಿ ಸನಾ ಖಾನ್ ನಾಗ್ಪುರದಿಂದ ಖಾಸಗಿ ಬಸ್ನಲ್ಲಿ ಹೊರಟು ಜಬಲ್ಪುರ ನಗರಕ್ಕೆ ತಲುಪಿದ ನಂತರ ತನ್ನ ತಾಯಿಗೆ ಕರೆ ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ ನಾಪತ್ತೆಯಾಗಿದ್ದು, ಮತ್ತೊಮ್ಮೆ ಸನಾ ಖಾನ್ ಅವರ ತಾಯಿ ಫೋನ್ ಮಾಡಿದಾಗ ಕರೆಯನ್ನು ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ. ಸನಾ ಖಾನ್ ಅವರು ಜಬಲ್ಪುರಕ್ಕೆ ಭೇಟಿ ನೀಡಿದ ನಂತರ ನಾಪತ್ತೆಯಾಗಿದ್ದಾರೆ.
ಆದರೆ ಪತಿ ಅಮಿತ್ ಸಾಹು ಯಾಕೆ ಸನಾ ಖಾನ್ ಅವರನ್ನು ಕೊಂದಿದ್ದಾರೆ ಎಂಬ ಬಗ್ಗೆ ಬಾಯಿಬಿಟ್ಟಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿರುವ ನಾಗ್ಪುರ ಪೊಲೀಸ್ ತಂಡ ಮಹಾರಾಷ್ಟ್ರಕ್ಕೆ ತೆರಳಿದ್ದು, ಇಂದು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.