ಬೆಂಗಳೂರು, ಆ 12 (DaijiworldNews/MS): ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, 9 ಜನ ಬಿಬಿಎಂಪಿ ನೌಕರಿಗೆ ತೀವ್ರ ರೀತಿಯಲ್ಲಿ ಸುಟ್ಟ ಗಾಯಗಳಾಗಿವೆ.
ಬಿಬಿಎಂಪಿ ಕಾಮಗಾರಿಗಳ ತನಿಖೆಗೆ ಸರ್ಕಾರದ ಮುಂದಾದ ಹೊತ್ತಲ್ಲಿಯೇ ಬಿಬಿಎಂಪಿ ಕಚೇರಿಯ ಗುಣನಿಯಂತ್ರಣ ವಿಭಾಗದ ಪ್ರಯೋಗಾಲಯ ಮತ್ತು ಕಚೇರಿ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಶುಕ್ರವಾರ ಸಂಜೆ 5 ಗಂಟೆ ಹೊತ್ತಲ್ಲಿ ಬಿಬಿಎಂಪಿಯ ಗುಣನಿಯಂತ್ರಣ ವಿಭಾಗದ ಪ್ರಯೋಗಾಲಯದಲ್ಲಿ ಬೆಂಕಿ ಅನಾಹುತ ಉಂಟಾಗಿದ್ದು, ಚೀಫ್ ಎಂಜಿನಿಯರ್ ಶಿವಕುಮಾರ್, ನಾಲ್ವರು ಎಂಜಿನಿಯರ್ಗಳು ಸೇರಿ 9 ನೌಕರರು ಗಾಯಗೊಂಡಿದ್ದಾರೆ. ಬೆಂಕಿ ಹೊತ್ತಿದ ಅರ್ಧ ಗಂಟೆ ನಂತರ ಬಂದ ಅಗ್ನಿಶಾಮಕ ಪಡೆಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಮುಖ್ಯ ಇಂಜಿನಿಯರ್ ಕೆ.ಪ್ರಹ್ಲಾದ್ ದೂರು ದಾಖಲಿಸಿದ್ದಾರೆ.
ಘಟನಾ ಸ್ಥಳದಲ್ಲಿ ಅನುಮಾನವಾಗಿ ವರ್ತಿಸುತ್ತಿದ್ದ ಮೂವರನ್ನುಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರು ಘಟನಾ ಸ್ಥಳದಲ್ಲಿದ್ದರೂ ಗಾಯಗೊಂಡಿಲ್ಲ. ಇದರಿಂದ ಅನುಮಾನಗೊಂಡಿರುವ ಪೊಲೀಸರು ಮೂವರನ್ನ ವಶಕ್ಕೆ ಪಡೆದು ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ
ಕಚೇರಿ ಬಾಗಿಲಲ್ಲಿ ಆಯಿಲ್ ಮಾದರಿ ವಸ್ತು ಕಂಡುಬಂದಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 337, 338ರಡಿ ಎಫ್ಐಆರ್ ದಾಖಲಾಗಿದೆ