ನವದೆಹಲಿ, ಏ 08 (MSP): ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ 'ಸಂಕಲ್ಪ ಪತ್ರ' ಎಂಬ ಹೆಸರಿನಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಈ ಬಾರಿಯೂ ರಾಮಮಂದಿರ ರಾರಾಜಿಸುತ್ತಿದ್ದು, ಇದರೊಂದಿಗೆ ಶಬರಿಮಲೆ, ಏಕರೂಪ ನಾಗರಿಕ ಸಂಹಿತೆ ಮತ್ತು ನಾಗರಿಕತ್ವ ತಿದ್ದುಪಡಿ ಮಸೂದೆ , ಜಾಗತಿಕವಾಗಿ ಯೋಗದ ಪ್ರಚಾರ, ಶಬರಿಮಲೆ ಅಭಿವೃದ್ಧಿಯನ್ನು ಮುಂತಾದ ವಿಚಾರಗಳು ಹೈಲೈಟ್ ಆಗಿವೆ.
48 ಪುಟಗಳ 'ಸಂಕಲ್ಪ ಪತ್ರ' ಪ್ರಣಾಳಿಕೆಯಲ್ಲಿ 2022 ರ ಒಳಗೆ 75 ಭರವಸೆಗಳನ್ನು ಪೂರೈಸುವುದಾಗಿ ಹೇಳಿದೆ. ಭಾರತದ ಸ್ವಾತಂತ್ರ್ಯ ಪಡೆದು 75 ವರ್ಷಗಳ ನೆನಪಿಗಾಗಿ 75 ಭರವಸೆಗಳನ್ನು ಪ್ರಣಾಳಿಕೆ ನೀಡಲಾಗಿದೆ.
ಇದಲ್ಲದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ 60 ವರ್ಷ ತುಂಬಿದ ಎಲ್ಲ ರೈತರಿಗೆ ಪಿಂಚಣಿ, ಮ್ಯಾನೇಜ್ಮೆಂಟ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆ ಹೆಚ್ಚಳ ,ದೇಶದ ಎಲ್ಲ ಮನೆಗಳಿಗೆ ಅಡುಗೆ ಅನಿಲ, ಶೌಚಾಲಯ, ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕ ನೀಡುವ ಭರವಸೆ ನೀಡಿದೆ.
ಇದಲ್ಲದೆ ರಾಷ್ಟ್ರೀಯ ಹೆದ್ದಾರಿಗಳ ಉದ್ದ ದ್ವಿಗುಣ, ಗ್ರಾಮೀಣ ಅಭಿವೃದ್ಧಿಗೆ 25 ಲಕ್ಷ ಮುಂತಾದ ಭರವಸೆ ನೀಡಿದೆ.