ನವದೆಹಲಿ,ಏ 08 (MSP): ಲೋಕಸಭೆ ಚುನಾವಣೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 5 ವರ್ಷಗಳಲ್ಲಿ ಅವರ ಅಧಿಕೃತ ವಿದೇಶ ಪ್ರವಾಸದ ವೇಳೆ ಆಗಿರುವ ವಿಮಾನ ಪ್ರಯಾಣದ ವೆಚ್ಚವನ್ನು ಏರ್ ಇಂಡಿಯಾ ಸಂಸ್ಥೆ ಪ್ರಕಟಿಸಿದೆ. ಪ್ರಧಾನಿ ಮೋದಿ ಅವರ ಅಧಿಕೃತ ವಿದೇಶಿ ಪ್ರವಾಸಗಳ ವೆಚ್ಚ 443.4 ಕೋಟಿ ರೂಪಾಯಿ ಆಗಿದೆ.
ಆದರೆ ಈ ವೆಚ್ಚದಲ್ಲಿ ಇನ್ನೂ 5 ದೇಶಗಳಿಗೆ ತೆರಳಲು ಆಗಿರುವ ಖರ್ಚು ವೆಚ್ಚವನ್ನು ಇನ್ನಷ್ಟೇ ಭರಿಸಬೇಕಿದೆ. 2014 ರ ಮೇಯಿಂದ ಈವರೆಗೆ ಮೋದಿ 44 ಅಂತರಾಷ್ಟ್ರೀಯ ಪ್ರಯಾಣ ಕೈಗೊಂಡಿದ್ದು, ಈ ವಿಚಾರದಲ್ಲಿ ಅವರು ಈ ಹಿಂದಿನ ಎಲ್ಲಾ ಪ್ರಧಾನಿಗಳನ್ನೂ ಮೀರಿಸಿದ್ದಾರೆ. ಇನ್ನು ಈ ತಿಂಗಳಲ್ಲಿ ಅವರು ಯುಎಈ ಪ್ರವಾಸ ಕೈಗೊಳ್ಳಲಿದ್ದು, ಇದು ಅವರ ಹಾಲಿ ಅಧಿಕಾರಾವಧಿಯ ಕೊನೆಯ ವಿದೇಶ ಪ್ರವಾಸ ಆಗಿರಲಿದೆ.
ಏರ್ ಇಂಡಿಯಾ ಸಂಸ್ಥೆ ಪ್ರಕಟಿಸಿರುವ ಮಾಹಿತಿಯಂತೆ 443.4 ಕೋಟಿ ರೂಪಾಯಿ ವಿದೇಶ ಪ್ರವಾಸದ ಪ್ರಯಾಣದ ವೆಚ್ಚ ಮಾತ್ರ ಆಗಿದೆ ಇದರಲ್ಲಿ ಪ್ರವಾಸದ ವೇಳೆ ಆಗಿರುವ ಇತರ ಖರ್ಚುವೆಚ್ಚಗಳು ಸೇರಿಲ್ಲ ಎಂದಿದೆ. ಎಲ್ಲಾ ವೆಚ್ಚವನ್ನು ಏರ್ ಇಂಡಿಯಾಕ್ಕೆ ಭರಿಸಲಾಗಿದೆ ಎಂದು ತಿಳಿಸಿದೆ
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 2009 ರಿಂದ 2014ರ ಅವಧಿಯಲ್ಲಿ ಸುಮಾರು 493.2 ಕೋಟಿ ರೂ ವೆಚ್ಚದಲ್ಲಿ 38 ವಿದೇಶಿ ಪ್ರವಾಸ ಮಾಡಿದ್ದರು. ಡಾ. ಮನಮೋಹನ್ ಸಿಂಗ್ ಅವರು ಏರ್ ಇಂಡಿಯಾ ವಿಮಾನಗಳನ್ನು ಮಾತ್ರ ಬಳಸಿದ್ದಾರೆ.