ಕಾಸರಗೋಡು, ಎ08(SS): ಸದ್ಯ ಎಲ್ಲೆಡೆ ಲೋಕಸಭಾ ಚುನಾವಣೆಯ ಬಿಸಿ ಕಾವೇರುತ್ತಿದ್ದು, ಪ್ರಚಾರದ ಭರಾಟೆಯೂ ಜೋರಿದೆ. ಮತ್ತೂಂದೆಡೆ ರಾಜಕೀಯ ಪಕ್ಷಗಳ ಮುಖಂಡರಿಂದ ಧಾರ್ಮಿಕ ಕೇಂದ್ರಗಳ ಭೇಟಿಯೂ ಭರ್ಜರಿಯಾಗಿಯೇ ನಡೆಯುತ್ತಿದೆ.ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಭ್ಯರ್ಥಿಗಳು ಹಾಗೂ ಬೆಂಬಲಿಗರು ತಮ್ಮ ಎದುರಾಳಿಗಳನ್ನು ಸೋಲಿಸಲು ಹಲವು ತಂತ್ರಗಳನ್ನು ಉಪಯೋಗಿಸುತ್ತಿದ್ದಾರೆ. ಮಾತ್ರವಲ್ಲ, ಈ ನಡುವೆ ಪ್ರಬಲ ನಾಯಕರು ರಾಜ್ಯದ ಎಲ್ಲೆಡೆ ಪ್ರಚಾರಕ್ಕೂ ಆಗಮಿಸುತ್ತಿದ್ದಾರೆ.
ಇದೀಗ ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಕೇರಳಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಬರಿಮಲೆ ಕ್ಷೇತ್ರಕ್ಕೆ ಕರೆತರಲು ಕೇರಳದ ಬಿಜೆಪಿ ಮುಖಂಡರು ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಕುರಿತು, ರಾಜ್ಯ ನಾಯಕರ ಒಂದು ತಂಡ ಕೇಂದ್ರ ಸಮಿತಿ ಜತೆ ನಿರಂತರ ಮಾತುಕತೆ ನಡೆಸುತ್ತಿದೆ. ಕೇರಳದಲ್ಲಿ ಏ.12, 18ರಂದು ಮೋದಿ ಪ್ರಚಾರ ಮಾಡಲಿದ್ದಾರೆ. ಶಬರಿಮಲೆ ವಿವಾದಕ್ಕೆ ಸಂಬಂಧಿಸಿ ನಡೆಯುತ್ತಿರುವ ಹೋರಾಟದಲ್ಲಿ ಬಿಜೆಪಿ ಮುಂಚೂಣಿಯಲ್ಲಿ ಇದ್ದು, ಪ್ರಧಾನಿ ಮೋದಿ ಶಬರಿಮಲೆ ಭೇಟಿ ಪಕ್ಷಕ್ಕೆ ಹೆಚ್ಚಿನ ಲಾಭ ತಂದೊಡ್ಡಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ ಎಂದು ಹೇಳಲಾಗಿದೆ.